ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾಮೂಹಿಕ ಲಸಿಕೆ ಪ್ರಶ್ನಿಸಿದ್ದ ನಿವೃತ್ತ ಸೇನಾಧಿಕಾರಿಗೆ ರೂ.50 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದೆ ಕೊರೋನಾ ಲಸಿಕೆ ನೀಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ರೂ.50 ಸಾವಿರ ದಂಡ ವಿಧಿಸಿ ಆದೇಶಿಸಿದೆ. 

ಬೆಂಗಳೂರು: ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದೆ ಕೊರೋನಾ ಲಸಿಕೆ ನೀಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ರೂ.50 ಸಾವಿರ ದಂಡ ವಿಧಿಸಿ ಆದೇಶಿಸಿದೆ. 

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ನೀಡುತ್ತಿರುವ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ನಲ್ಲಿ ಪರೀಕ್ಷಿಸಿಲ್ಲ. ಹೀಗಾಗಿ ಲಸಿಕೆ ಕಾರ್ಯವನ್ನು ನಿಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿ ನಿವೃತ್ತ ಸೇನಾಧಿಕಾರಿ ಹಾಗೂ ಇತರ ಇಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ. ಹೀಗಾಗಿ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಕಳೆದ ಜನವರಿಯಿಂದಲೇ ಲಸಿಕೆ ಅಭಿಯಾನ ಆರಂಭವಾಗಿದ್ದರೂ, ಅರ್ಜಿದಾರರು ಮೇ ತಿಂಗಳಲ್ಲಿ ಬಂದು ಲಸಿಕೆ ಅಭಿಯಾನಕ್ಕೆ ತಡೆ ನೀಡಲು ಕೋರಿರುವುದು ಸರಿಯಲ್ಲ ಎಂದು ಹೇಳಿತು. 

ದೇಶದಲ್ಲಿ ಲಕ್ಷಾಂತರ ಜನ ಲಸಿಕೆಗಾಗಿ ಕಾಯುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯ ಹಲವು ವಿಚಾರಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ. ಈ ವೇಳೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡುವ ಯತ್ನ ಮಾಡಲಾಗಿದೆ ಎಂದು ತಿಳಿಸಿತು. ಅಲ್ಲದೆ, ಅರ್ಜಿ ವಜಾ ಮಾಡಿ ಅರ್ಜಿದಾರರಿಗೆ ರೂ.50 ಸಾವಿರ ದಂಡ ವಿಧಿಸಿತು. 

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಸರ್ಕಾರ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿದೆ. ಆದರೆ, ಅದಕ್ಕೆ ಯಾವುದೇ ದಾಖಲೆಗಳಿಲ್ಲ, ಅಲ್ಲದೆ ಸರ್ಕಾರ 2019ರ ಔಷಧ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ನಿಯಮಗಳನ್ನು ಗಾಳಿಗೆ ತೂರಿದೆ, ಹಾಗಾಗಿ ಸಾಮೂಹಿಕ ಲಸಿಕೀಕರಣವನ್ನು ತಡೆಯಬೇಕು. ಇಲ್ಲವಾದರೆ ವ್ಯಾಪಕ ಸಾಮಾಜಿಕ ಹಾನಿಯಾಗಲಿದೆ ಎಂದು ಪೀಠಕ್ಕೆ ವಿವರಿಸಿದರು.

Related Stories

No stories found.

Advertisement

X
Kannada Prabha
www.kannadaprabha.com