ಕೊರೋನಾ 3ನೇ ಅಲೆ ಎದುರಿಸಲು ಮಕ್ಕಳಿಗಾಗಿ ವಿಶೇಷ ವಾರ್ಡ್ ಗಳ ರಚನೆ: ಸಚಿವ ಅರವಿಂದ ಲಿಂಬಾವಳಿ

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿ ಇದೆ. ಹೀಗಾಗಿ ಪರಿಸ್ಥಿತಿ ಎದುರಿಸಲು ವಿಶೇಷ ವಾರ್ಡ್ ಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದು ನಿಯಂತ್ರಣ ಕೊಠಡಿ, ಸಹಾಯವಾಣಿ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿಯವರು ಹೇಳಿದ್ದಾರೆ. 
ಸಚಿವ ಅರವಿಂದ ಲಿಂಬಾವಳಿ
ಸಚಿವ ಅರವಿಂದ ಲಿಂಬಾವಳಿ

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿ ಇದೆ. ಹೀಗಾಗಿ ಪರಿಸ್ಥಿತಿ ಎದುರಿಸಲು ವಿಶೇಷ ವಾರ್ಡ್ ಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದು ನಿಯಂತ್ರಣ ಕೊಠಡಿ, ಸಹಾಯವಾಣಿ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿಯವರು ಹೇಳಿದ್ದಾರೆ. 

ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಕೋವಿಡ್ ವಾರ್ ರೂಮ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಪಾಲ್ಗೊಂಡ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್‌ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ವರದಿ ಇದೆ. ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ಮುಂಬೈ ಮಾದರಿಯ ಸೋಂಕು ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಮಕ್ಕಳಿಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ಗಳನ್ನು ರೂಪಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಹಾಸಿಗೆ ಹಂಚಿಕೆಗಾಗಿ ಇನ್ನು ಮುಂದೆ ಸರತಿ ಸಾಲಿನ ಕ್ರಮವನ್ನು ಅನುಸರಿಸಲಾಗುವುದು, ಬೆಡ್ ಬುಕ್ ಮಾಡಲು ಕರೆ ಮಾಡುವವರಿಗೆ ಕ್ಯೂ ವ್ಯವಸ್ಥೆ ಮೂಲಕ ಹಾಸಿಗೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು. ಸೋಂಕಿತರು ಬೆಡ್ ಬುಕ್ ಮಾಡಲು ಕರೆ ಮಾಡಿದಾಗ ಅವರಿಗೆ ಆಟೋಮ್ಯಾಟಿಕ್ ಕ್ಯೂ ಸಂಖ್ಯೆ ಕೊಡಲಾಗುತ್ತದೆ. ಒಟ್ಟು ರಿಜಿಸ್ಟ್ರೇಷನ್ ಸಂಖ್ಯೆ ಆಧಾರದಲ್ಲಿ ಅವರು ಯಾವ ಸಂಖ್ಯೆಯಲ್ಲಿದ್ದಾರೆ. ಈಗ ಯಾವ ಸಂಖ್ಯೆಯ ದಾಖಲಾತಿ ನಡೆಯುತ್ತಿದೆ ಎಂಬ ಮಾಹಿತಿ ಅವರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಮುಂದಿನ ಎರಡು ದಿನಗಳಲ್ಲಿ ಆರಂಭವಾಗಲಿದೆ. ಇದರ ಪರಿಣಾಮಗಳನ್ನು ಅನುಸರಿಸಿ ಮುಂದೆ ಇದನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ. 

ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ರೋಗದ ತೀವ್ರತೆ ಅನುಸರಿಸಿ ಅವರಿಗೆ ಹಾಸಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ವಾರ್ ರೂಮ್ ನ ಕಾರ್ಯನಿರ್ವಹಣೆ ಹೆಚ್ಚು ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ಮಾಡಲು ಈಗಿರುವ ಸಾಫ್ಟ್ವೇರ್ ಗೆ ಅನೇಕ ಸುಧಾರಣೆ ಮಾಡಲು ಉದ್ದೇಶಿಸಿದೆ ಅದು ಕೆಲವೇ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ಈಗಿರುವ ಎಸ್ಎಂಎಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ ಹಾಸಿಗೆ ಹಂಚಿಕೆಯಾಗಿರುವ ರೋಗಿಗಳು ನಾಲ್ಕು ಗಂಟೆಯ ಒಳಗೆ ಆಸ್ಪತ್ರೆಯ ತಲುಪದೇ ಹೋದರೆ ಅವರಿಗೆ ಮತ್ತೆ ಎಸ್ಎಂಎಸ್ ಮೂಲಕ ಜಾಗೃತ ಗೊಳಿಸುವ ಮೆಸೇಜ್ ಕಳುಹಿಸಲಾಗುತ್ತದೆ, ಆಸ್ಪತ್ರೆಯಲ್ಲಿನ ನೋಡಲ್ ಅಧಿಕಾರಿ ಗೆ ಕೂಡ ಮೆಸೇಜ್ ಹೋಗುತ್ತದೆ. ಪ್ರಸ್ತುತ ಚಿಕಿತ್ಸಾ ಕೇಂದ್ರಗಳಲ್ಲಿ ದೈಹಿಕ ತಪಾಸಣೆಗೆ ಒಳಗಾಗುವವರಿಗೆ ವೈದ್ಯರ ಸಲಹೆ ಮೇರೆಗೆ ಅದರ ವ್ಯಾಪ್ತಿಯ ರೆಫರಲ್ ಆಸ್ಪತ್ರೆ ಗಳಲ್ಲಿ ಹಾಸಿಗೆ ಕಾಯ್ದಿರಿಸಲು ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com