ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸುವ 'ಆಕಾಂಕ್ಷಾ ಪೋರ್ಟಲ್'ಗೆ ಸಿಎಂ ಯಡಿಯೂರಪ್ಪ ಚಾಲನೆ

ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸುವ ಸಮಗ್ರ ಆನ್'ಲೈನ್ ವೇದಿಕೆ ಆಕಾಂಕ್ಷಾ ಪೋರ್ಟಲ್'ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಚಾಲನೆ ನೀಡಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸುವ ಸಮಗ್ರ ಆನ್'ಲೈನ್ ವೇದಿಕೆ ಆಕಾಂಕ್ಷಾ ಪೋರ್ಟಲ್'ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಚಾಲನೆ ನೀಡಿದರು.

ರಾಜ್ಯಮಟ್ಟದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಸೌಲಭ್ಯಗಳನ್ನು ಸುಗಮವಾಗಿ ಮುಂದುವರೆಸಲು ಸರ್ಕಾರ ಮತ್ತು ದಾನಿಗಳ ನಡುವೆ ಒಂದು ಪಾರದರ್ಶಕ ಸೇತುವೆಯಾಗಿ ಈ ಪೋರ್ಟಲ್ ಕಾರ್ಯನಿರ್ವಹಿಸಲಿದೆ. 

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಆಕಾಂಕ್ಷಾ ಪೋರ್ಟಲ್ ನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ಅವರು, ಪೋರ್ಟಲ್'ನ ಸಹಾಯದಿಂದ ಸಿಎಸ್ಆರ್ ಅನುದಾನವನ್ನು ಅಗತ್ಯ ಇರುವ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿದೆ. ಕೋವಿಡ್ ನಿಯಂತ್ರಣ ಪ್ರಕ್ರಿಯೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಶ್ಲಾಘನೀಯ. ಈಗಾಗಲೇ ಆರೋಗ್ಯ ವಲಯಕ್ಕೆ ರೂ.175 ಕೋಟಿ ಸಿಎಸ್ಆರ್ ನಿಧಿಯನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. 

ವಿಶ್ವಸಂಸ್ಥೆಯು ನಿಗದಿ ಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ವಿಷನ್ 2030 ನ್ನು ತಯಾರಿಸಲಾಗಿದೆ. ಇದಕ್ಕಾಗಿ ಬೇಡಿಕೆ ಇರುವ 75 ಸಾವಿರ ಕೋಟಿ ರೂ. ಅನುದಾನದ ಪೈಕಿ 61,000 ಕೋಟಿ ರೂ. ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. 

ಕಳೆದ ಸಾಲಿನಲ್ಲಿ ಆರೋಗ್ಯ ವಲಯದ ಚಟುವಟಿಕೆಗಳಿಗೆ 11,527 ಕೋಟಿ ರೂ. ವೆಚ್ಚ ಮಾಡಿದ್ದು, ಪ್ರಸಕ್ತ ಸಾಲಿಗೆ 11,650 ಕೋಟಿ ರೂ. ಒದಗಿಸಲಾಗಿದೆ. ಕೋವಿಡ್ 19ರ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿರ್ಬಂಧದಿಂದ ಬಾಧಿತರಾದವರಿಗೆ 1250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. ಅಲ್ಲದೆ, 2.06 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ. ವೆಚ್ಚ ಭರಿಸಲಾಗುತ್ತಿದೆ. ಕೊರೋನಾ ಸಂಕಷ್ಟಕ್ಕೆ ನೆರವಾಗಲು ಬಯಸುವವರು ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು ನೀಡಲು ಬಯಸುವ ದಾನಿಗಳು ಆಕಾಂಕ್ಷಾ ಪೋರ್ಟಲ್ ಮೂಲಕ ನೆರವು ನೀಡಬಹುದಾಗಿದೆ ಎಂದು ತಿಳಿಸಿದರು.

ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರು ಮಾತನಾಡಿ, ಕರ್ನಾಟಕ ವಿವಿಧ ವಲಯಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಕರ್ನಾಟಕವು ಪ್ರಾರಂಭಿಸಿರುವ ಆಕಾಂಕ್ಷಾ ಪೋರ್ಟಲ್, ಸಿಎಸ್ಆರ್ ನಿಧಿ ಅಗತ್ಯವಿರುವ ಜಿಲ್ಲೆಗಳ ಅಭಿವೃದ್ಧಿಗೆ ಬಳಕೆಯಾಗಲು ನೆರವಾಗಲಿದೆ. ಆ ಮೂಲಕ ರಾಜ್ಯದ ಎಲ್ಲ ಭಾಗಗಳ ಸಮಾನ ಅಭಿವೃದ್ಧಿಗೆ ಸಾಧನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com