ರಾಜ್ಯದ ಮಹಿಳೆಯರು, ಪೊಲೀಸ್ ಇಲಾಖೆ ಆತ್ಮಗೌರವ ರಕ್ಷಣೆಗೆ ರಮೇಶ್ ಜಾರಕಿಹೊಳಿ ಬಂಧನ ಅಗತ್ಯ: ಡಿಕೆಶಿ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯದ ಮಹಿಳೆಯರ ಹಾಗೂ ಪೊಲೀಸ್ ಅಧಿಕಾರಿಗಳ ಆತ್ಮಗೌರವವನ್ನು ರಕ್ಷಿಸಲು ಮಾಜಿ ಸಚಿವ ಹಾಗೂ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯನ್ನು ತಕ್ಷಣ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ
ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಗೃಹಮಂತ್ರಿ, ರಾಜ್ಯದ ಮಹಿಳೆಯರ ಹಾಗೂ ಪೊಲೀಸ್ ಅಧಿಕಾರಿಗಳ ಆತ್ಮಗೌರವವನ್ನು ರಕ್ಷಿಸಲು ಮಾಜಿ ಸಚಿವ ಹಾಗೂ ಪ್ರಕರಣದ ಆರೋಪಿ ರಮೇಶ್ ಜಾರಕಿಹೊಳಿಯನ್ನು ತಕ್ಷಣ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್, ವ್ಯಕ್ತಿಗಿಂತ ರಾಜ್ಯದ ಪೋಲೀಸ್ ಇಲಾಖೆ ಗೌರವ ಮುಖ್ಯ. ಪೊಲೀಸ್ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ರಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಟ್ಟ ಸಂಪ್ರದಾಯಕ್ಕೆ ಬುನಾದಿ 
ಹಾಕಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಭವಿಷ್ಯದಲ್ಲಿ  ಈ ಪ್ರಕರಣವನ್ನು ಜನರು ಉದಾಹರಣೆಯನ್ನಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ತಾವು ಸೌಮೇಂದು ಮುಖರ್ಜಿ, ಸಂದೀಪ್ ಪಾಟೀಲ್, ಅನುಚೇತ್ ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸುವಂತೆ ಸಲಹೆ ನೀಡುತ್ತಿದ್ದೇನೆ. ಪೊಲೀಸರು ಹತ್ತಾರು ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕಿದೆ. ರಾಜಕಾರಣಿಗಳು ಇಂದು ಇರುತ್ತಾರೆ, ನಾಳೆ ಹೋಗುತ್ತಾರೆ. ಆದರೆ ಪೊಲೀಸರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬಾರದು ಎಂದರು.

ಪ್ರಕರಣದ ಸಂತ್ರಸ್ತ ಯುವತಿ ದೂರು ಕೊಟ್ಟರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಗೃಹ ಸಚಿವ ಬೊಮ್ಮಾಯಿ ಹೇಳಿದ್ದರು. ಆಕೆ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದು, ಲಿಖಿತ ದೂರನ್ನೂ ನೀಡಿದ್ದಾಳೆ. ಆದರೆ, ಪೊಲೀಸರು ಯಾರನ್ನನೂ ಬಂಧಿಸಿಲ್ಲ ಎಂದು ಕಿಡಿಕಾರಿದರು.

ಆ ಸಂತ್ರಸ್ತೆ ವಿರುದ್ಧ ಮಾಧ್ಯಮಗಳಲ್ಲಿ ವರದಿ ಬರುವ ಹಾಗೆ ಮಾಡುತ್ತಿದ್ದೀರಿ. ಆಕೆಯ ತಂದೆ-ತಾಯಿಗೆ ನೋಟೀಸ್ ಕೊಟ್ಟು ಕಿರುಕುಳ ಕೊಡುತ್ತಿದ್ದೀರಿ. ಅವರ ಮೇಲೆ ಒತ್ತಡ ಹಾಕಲು ಅವಕಾಶ ಮಾಡಿಕೊಡುತ್ತಿದ್ದೀರಿ. ಆ ಹೆಣ್ಣುಮಗಳ ತಂದೆ-ತಾಯಿ, ಸಹೋದರರು ಯಾರದೋ ಒತ್ತಡದಲ್ಲಿ ನನ್ನ ಬಗ್ಗೆ ಮಾತಾಡಿದರು. ನನಗೇನೂ ಬೇಜಾರಿಲ್ಲ. ಅವರೀಗ ಪೊಲೀಸರ ನೋಟೀಸ್ ನೋಡಿ ನೋವು ಪಡುತ್ತಿದ್ದಾರೆ. ಅವರಿಗೆ ಟಾರ್ಚರ್ ಕೊಡುತ್ತಿದ್ದೀರಿ. ನಿಮ್ಮದು ರಾಮ ರಾಜ್ಯವೋ, ರಾವಣನ ರಾಜ್ಯವೋ? ಎಂದು ಪ್ರಶ್ನಿಸಿದ್ದಾರೆ.

ಆರೋಪಿಯನ್ನು ಬಂಧಿಸದಿರಲು  ಕೊರೋನಾ ಸೋಂಕು ಕಾರಣ ಅಂತಾ ಪೊಲೀಸರು ನೆಪ ಹೇಳಿದರು. ಜನರು ಸೋಂಕು ಬಂದರೆ ಬೆಂಗಳೂರಿನ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಅವರು ಗೋಕಾಕ್ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅಂತಹ ಸ್ಪೆಷಾಲಿಟಿ ಆಸ್ಪತ್ರೆ ಇದೆಯೇ? ಅವರ ಕೊರೋನಾ ರಿಪೋರ್ಟ್ ಎಲ್ಲಿದೆ? ಯಾರಾದರೂ ಸೋಂಕಿತ ಪಿಪಿಇ ಕಿಟ್ ಹಾಕಿಕೊಂಡು ಚಿಕಿತ್ಸೆ ಪಡೆಯುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ನಾನು ಕೇವಲ ನರ್ಸ್, ಡಾಕ್ಟರ್, ಶವ ಸಾಗಿಸುವರು ಮಾತ್ರ ಪಿಪಿಇ ಕಿಟ್ ಹಾಕಿಕೊಳ್ಳೋದು ನೋಡಿದ್ದೆ. ಆರೋಪಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ? ನೀವೆಲ್ಲ ಹೇಗೆ ಸಹಾಯ ಮಾಡುತ್ತಿದ್ದೀರಿ? ಹೇಗೆ ಅವರ ರಕ್ಷಣೆಗೆ ನಿಂತಿದ್ದೀರಿ ನೋಡಿ ಎಂದು ಲೇವಡಿ ಮಾಡಿದರು.

ಈ ಪ್ರಕರಣ ಸಮ್ಮತಿಯಿಂದ ನಡೆದಿದೆಯೋ, ಬಲವಂತದಿಂದ ನಡೆದಿದಿಯೋ ಎಂದು ತೀರ್ಮಾನ ಮಾಡುವುದು ಪೊಲೀಸ್ ಅಧಿಕಾರಿಗಳಲ್ಲ. ಇದನ್ನು ಮಾಡಲು ಸಾಧ್ಯವಿಲ್ಲ ಮುಖರ್ಜಿ ಅವರೇ. ನಿಮ್ಮ ಸ್ಥಾನದ ಗೌರವಕ್ಕೆ ನೀವು ಮಸಿ ಬಳಿದುಕೊಳ್ಳಬೇಡಿ. ವಿಚಾರಣೆ ನಡೆದ ನಂತರ ಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ನೀವು ಬೇರೆಯವರಿಗೆ ಮಾದರಿ ಆಗಬೇಕು ಎಂದರು.

ಮಾಜಿ ಸಚಿವರ ಮೇಲೆ ರೇಪ್ ಆರೋಪ ಕೇಳಿ ಬಂದ ನಂತರ ಗೃಹ ಸಚಿವರನ್ನು ಅವರು ಭೇಟಿ ಮಾಡುತ್ತಾರೆ. ಇದನ್ನು ಮಾಧ್ಯಮಗಳು ವರದಿ ಮಾಡಿವೆ. ಸಂಬಂಧಪಟ್ಟವರು ಇದನ್ನು ನಿರಾಕರಿಸಿಲ್ಲ. ರೇಪ್ ಆರೋಪಿಯ ಫೋನ್ ಕರೆಗಳ ದಾಖಲೆ ತೆಗೆಯಿರಿ. ಈ ರೀತಿ ಇನ್ನು ಎಷ್ಟು ಹೆಣ್ಣುಮಕ್ಕಳು ಇಂತಹ ಪರಿಸ್ಥಿತಿ ಎದುರಿಸಿದ್ದಾರೋ? ಈ ಪ್ರಕರಣ ಹೈಕೋರ್ಟ್ ನಿರ್ದೇಶನದಲ್ಲಿ ತನಿಖೆ ಆಗಬೇಕು.

ಗೃಹ ಸಚಿವರೇ ನಿಮ್ಮ ಹೆಸರು ಪ್ರಮುಖ ಹುದ್ದೆಯ ಚರ್ಚೆಯಲ್ಲಿದೆ. ನಿಮಗೆ ಒಳ್ಳೆಯದಾಗಲಿ. ಆದರೆ ಈ ಪ್ರಕರಣದಲ್ಲಿ ನಿಮ್ಮ ತಪ್ಪುಗಳು ನಿಮಗೇ ಕಪ್ಪುಚುಕ್ಕೆ ಆಗಬಾರದು. ನೀವು ಕೇವಲ ಗೃಹ ಸಚಿವರಲ್ಲ, ಕಾನೂನು ಸಚಿವರೂ ಹೌದು. ನಿಮ್ಮ ತಂದೆ ಅವರು ಎಂತಹ ಹೆಸರು ಮಾಡಿದ್ದರು. ನೀವು ಕೂಡಲೇ ರೇಪ್ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ನೀವು ಕ್ರಮ ಕೈಗೊಳ್ಳುತ್ತಿರುವ ರೀತಿ ನೋಡಿದರೆ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಗೆ ಸಿಗುವುದಿಲ್ಲ ಎಂಬ ಸಂದೇಶ ರವಾನೆ ಆಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com