ಉಡುಪಿ ಅಂಗನವಾಡಿ ಕೇಂದ್ರಗಳಲ್ಲಿ ಇಂದಿನಿಂದ ಚಿಣ್ಣರ ಕಲರವ!

ಕೋವಿಡ್ ಸಾಂಕ್ರಾಮಿಕ ರೋಗ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಇಂದಿನಿಂದ (ನ.8) ತೆರೆಯುತ್ತಿದ್ದು, ಮತ್ತೆ ಪುಟ್ಟ ಮಕ್ಕಳ ನಗುವಿನ ಕಲರವ ಅಂಗನವಾಡಿ ಕೇಂದ್ರಗಳಲ್ಲಿ ಕೇಳಿ ಬರಲಿದೆ.
ಅಂಗನವಾಡಿ ಕೇಂದ್ರಗಳು
ಅಂಗನವಾಡಿ ಕೇಂದ್ರಗಳು

ಉಡುಪಿ: ಕೋವಿಡ್ ಸಾಂಕ್ರಾಮಿಕ ರೋಗ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಇಂದಿನಿಂದ (ನ.8) ತೆರೆಯುತ್ತಿದ್ದು, ಮತ್ತೆ ಪುಟ್ಟ ಮಕ್ಕಳ ನಗುವಿನ ಕಲರವ ಅಂಗನವಾಡಿ ಕೇಂದ್ರಗಳಲ್ಲಿ ಕೇಳಿ ಬರಲಿದೆ.

ಅಂಗನವಾಡಿಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳದ 4 ಶಿಶು ಅಭಿವೃದ್ದಿ ಯೋಜನಾಧಿಕಾರಿ ವ್ಯಾಪ್ತಿಯ 1,191 ಅಂಗನವಾಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.

ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿ, ಆಟಿಕೆ ಸಾಮಾನುಗಳನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದ್ದು, ಪೌಷ್ಟಿಕ ಆಹಾರ ತಯಾರಿಸುವ ಪಾತ್ರೆ, ಲೋಟ, ಕುಕ್ಕರ್‌ಗಳನ್ನು ಸ್ವಚ್ಛಗೊಳಿಸಲಾಗಿದೆ.

ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದು, ಎರಡೂ ಲಸಿಕೆ ಪಡೆದಿರುವ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪರಿಶೀಲಿಸಲಿದ್ದಾರೆ. 72 ಗಂಟೆಗಳ ಮುಂಚೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಅಂಗನವಾಡಿಯಲ್ಲಿ 1 ಮೀಟರ್‌ ಅಂತರದಲ್ಲಿ ಮಕ್ಕಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ಕೇಂದ್ರದಲ್ಲಿ ಸ್ಥಳದ ಕೊರತೆಯಾದರೆ ಪ್ರತಿದಿನ ಎಷ್ಟು ಮಕ್ಕಳು ಬರಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ. ಯಾವ ಮಕ್ಕಳು ಅಂಗನವಾಡಿಗೆ ಬರಬೇಕು ಎಂದು ಪೋಷಕರಿಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12ರ ವರೆಗೆ ಮಾತ್ರ ಅಂಗನವಾಡಿಯನ್ನು ತೆರೆಯಲು ನಿರ್ಧರಿಸಲಾಗಿದ್ದು, ಸದ್ಯ ಪೂರಕ ಪೌಷ್ಟಿಕ ಆಹಾರ ಹಾಗೂ ಆಹಾರ ಪದಾರ್ಥಗಳನ್ನು ಮನೆಗಳಿಗೆ ತಲುಪಿಸಲಾಗುವುದು. 15 ದಿನಗಳ ನಂತರ ಪರಿಸ್ಥಿತಿ ಅವಲೋಕಿಸಿ ಪೌಷ್ಟಿಕ ಆಹಾರವನ್ನು ಕೇಂದ್ರದಲ್ಲಿಯೇ ನೀಡಲಾಗುವುದು. ಆಹಾರ ತಯಾರಿಸುವವರು ಮುಖಗವಸು, ಕ್ಯಾಪ್ ಮತ್ತು ಏಪ್ರನ್ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com