ಬಾಗಲಕೋಟೆಯಲ್ಲಿ ಮೂರನೇ ಪಂಚಮಸಾಲಿ ಪೀಠ ಸ್ಛಾಪನೆ!

ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗಾಗಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪಂಚಮಸಾಲಿ ಸಮಾವೇಶ(ಸಂಗ್ರಹ ಚಿತ್ರ)
ಪಂಚಮಸಾಲಿ ಸಮಾವೇಶ(ಸಂಗ್ರಹ ಚಿತ್ರ)

ಬಾಗಲಕೋಟೆ/ ವಿಜಯಪುರ: ರಾಜ್ಯಾದ್ಯಂತತೀವ್ರ ಚರ್ಚೆಗೆ ಕಾರಣವಾಗಿದ್ದ ಪಂಚಮಸಾಲಿ ಸಮುದಾಯದಲ್ಲಿನ ಮಠಾಧೀಶರ ನಡುವಿನ ಭಿನ್ನಾಭಿಪ್ರಾಯಕ್ಕೆ ತಾರ್ಕಿಕ ಅಂತ್ಯ ಕಾಣುತ್ತಿದ್ದು ಕೊನೆಗೂ ಜಿಲ್ಲೆಯ ಜಮಖಂಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪನೆಯಾಗುವ ಮೂಲಕ ಈವರೆಗಿದ್ದ ಕುತೂಹಲಕ್ಕೆ ತೆರೆಬಿದ್ದಂತಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಗಾಗಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರಾಗಿ ಬಬಲೇಶ್ವರ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಉಪಾಧ್ಯಕ್ಷ ರೇವಣ ಸಿದ್ದ ಸ್ವಾಮೀಜಿ ಬೆಂಡವಾಡ, ಕಾರ್ಯದರ್ಶಿ ಸಂಗನ ಬಸವ ಸ್ವಾಮೀಜಿ, ಮನಗೂಳಿ ಹಿರೇಮಠ ಜೊತೆಗೆ 36 ಜನ ಸ್ವಾಮೀಜಿಗಳನ್ನೊಳಗೊಂಡ ಟ್ರಸ್ಟ್ ನೊಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ.

ನೂತನ ಪೀಠ ಸ್ಥಾಪನೆಗೂ ಮುನ್ನ ಮೊದಲ ಹೆಜ್ಜೆಯಾಗಿ  ಟ್ರಸ್ಟ್ ರಚಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಶೀಘ್ರವೇ ಮೂರನೇ ಪೀಠಕ್ಕೆ ಅಡಿಪಾಯ ಹಾಕಲಾಗುತ್ತದೆ. ಮಠಾಧೀಶರು 2 ಎಕರೆ ಭೂಮಿಯನ್ನು ಖರೀದಿಸಿದ್ದು, ಹೊಸ ಪೀಠಕ್ಕೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇನ್ನೂ 8 ಎಕರೆಗಳನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದಾರೆ.

ಕೆಲವೇ ದಿನದಲ್ಲಿ ಜಮಖಂಡಿ ಸಮೀಪದ ಆಲಗೂರು ರಸ್ತೆ ಬಳಿ ಮೂರನೇ ಪೀಠಕ್ಕೆ ಜಾಗ ಖರೀದಿಸುವ ಸಾಧ್ಯತೆಯಿದ್ದು, ಈಗಾಗಲೇ ಪಂಚಮಸಾಲಿ ಸಮುದಾಯದಲ್ಲಿ ಎರಡು ಪೀಠಗಳಿವೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತ ಪೀಠವಿದೆ. ಜೊತೆಗೆ ದಾವಣಗೆರೆ ಜಿಲ್ಲೆ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವಿದೆ. ಈ ಎರಡು ಪೀಠಗಳಿಗೆ ಪರ್ಯಾಯವಾಗಿ ಮೂರನೇ ಪೀಠಕ್ಕೆ ಪ್ರಕ್ರಿಯೆ ಚುರುಕುಗೊಂಡಿದೆ.

ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ''ಈಗಿರುವ ಎರಡು ಪೀಠಗಳ ಮಠಾಧೀಶರು ಧಾರ್ಮಿಕ ಕಾರ್ಯಗಳನ್ನು ಬದಿಗೊತ್ತಿ ರಾಜಕೀಯದಲ್ಲಿ ಮಗ್ನರಾಗಿದ್ದಾರೆ.  ಧಾರ್ಮಿಕ ಕೆಲಸ ಮಾಡುವುದಕ್ಕಾಗಿಯೇ ನೂತನ ಪೀಠ ಸ್ಥಾಪನೆಯಾಗಿದೆ. ರಾಜ್ಯದಲ್ಲಿ ಸುಮಾರು 110 ಪಂಚಮಸಾಲಿ ಮಠಗಳಿವೆ. ಈ ಪೈಕಿ 36 ಮಠಗಳು ಮಾತ್ರ ವಿಸ್ತರಣೆಯಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com