125 ವರ್ಷಗಳ ಸಂಭ್ರಮದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ: ಮಾಸದ ದೂರದೃಷ್ಟಿ

ನಾಡಿನ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ನೀಡುವ ಮೂಲಕ ಅಂಧತ್ವ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆಯು 125ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಾಡಿನ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸೆ ನೀಡುವ ಮೂಲಕ ಅಂಧತ್ವ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಿಂಟೋ ಕಣ್ಣಿನ ಆಸ್ಪತ್ರೆಯು 125ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.

ಬೆಂಗಳೂರಿನ ಸಂತೆಪೇಟೆ ರಸ್ತೆಯಲ್ಲಿ 1896ರಲ್ಲಿ ಸಣ್ಣ ಕ್ಲಿನಿಕ್​ ಆಗಿ ಪ್ರಾರಂಭವಾಗಿದ್ದ ಕಣ್ಣಿನ ಆಸ್ಪತ್ರೆಗೆ 1913ರಲ್ಲಿ ಕಟ್ಟಡವನ್ನು ನಿರ್ಮಿಸಲಾಯಿತು. ಅದೇ ಈಗಿರುವ ಮಿಂಟೋ ಕಣ್ಣಿನ ಆಸ್ಪತ್ರೆಯಾಗಿದೆ. 1982ರಲ್ಲಿ ಮಿಂಟೋ ನೇತ್ರ ಚಿಕಿತ್ಸಾ ಪ್ರಾದೇಶಿಕ ಸಂಸ್ಥೆ ಎಂಬ ಹೆಸರು ಪಡೆದುಕೊಂಡಿತು. ಆಗಿನ ವೈಸರಾಯ್​ ಆಗಿದ್ದ ಮಿಂಟೋ ನೆನಪಿನಾರ್ಥ ಆಸ್ಪತ್ರೆಗೆ ಅವರ ಹೆಸರಿಡಲಾಯಿತು.

1903ರಲ್ಲಿ ಆಡಳಿತಾತ್ಮಕ ಮತ್ತು ರೋಗಿಗಳ ಬ್ಲಾಕ್‌ಗೆ ಅಡಿಪಾಯ ಹಾಕಿದ್ದು ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರು. ಇದನ್ನು 1917ರಲ್ಲಿ 100 ಹಾಸಿಗೆಗಳ ಆಸ್ಪತ್ರೆಯೊಂದಿಗೆ ವಿಸ್ತರಿಸಲಾಯಿತು. ನಂತರ 1956ರಲ್ಲಿ ಬೋಧನಾ ಆಸ್ಪತ್ರೆ ಎಂದು ಗುರುತಿಸಲಾಯಿತು. ಕಾಲ ಕಳೆದಂತೆ 200 ಹಾಸಿಗೆಗಳ ಆಸ್ಪತ್ರೆಯಾದ ಮಿಂಟೋ, 1981ರಲ್ಲಿ ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸಲಾಯಿತು.

ಆಸ್ಪತ್ರೆಯು ಕರ್ನಾಟಕದಲ್ಲಿಯೇ ಅತಿ ದೊಡ್ಡ ಮಕ್ಕಳ ನೇತ್ರ ಚಿಕಿತ್ಸಾ ಘಟಕವನ್ನು ಹೊಂದಿದೆ. 1898 ರಲ್ಲಿ ಬೆಂಗಳೂರಿನಲ್ಲಿ ಪ್ಲೇಗ್ ಏಕಾಏಕಿ ಸಂಭವಿಸಿದಾಗ, ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗಿತ್ತು. ಇದೀಗ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಆಸ್ಪತ್ರೆಯು ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತಿದೆ.

ಮಿಂಟೋ ಆಸ್ಪತ್ರೆಗೆ ಪ್ರತಿ ವರ್ಷ ಹೆಚ್ಚೆಚ್ಚು ರೋಗಿಗಳು ಬಂದು ಹೋಗುತ್ತಾರೆಲಕ್ಷಾಂತರ ಜನರಿಗೆ ದೃಷ್ಟಿಭಾಗ್ಯ ಕರುಣಿಸಿರುವ ಮಿಂಟೋ ಆಸ್ಪತ್ರೆಯಲ್ಲಿ ನಿತ್ಯ 800ಕ್ಕೂ ಹೆಚ್ಚು ಮಂದಿ ಹೊರರೋಗಿಗಳು ಹಾಗೂ 50ಕ್ಕೂ ಹೆಚ್ಚು ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳೊಂದಿಗೆ 300 ಸುಸಜ್ಜಿತ ಹಾಸಿಗೆಗಳನ್ನು ಒಳಗೊಂಡಿದೆ. 4 ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ನಿತ್ಯ 40-50 ಶಸ್ತ್ರಚಿಕಿತ್ಸೆ ನಡೆಯುತ್ತದೆ. ವರ್ಷಕ್ಕೆ ಸರಾಸರಿ ಲಕ್ಷ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 250-300 ನೇತ್ರ ಕಸಿ ಮಾಡಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ “ಐ ಬ್ಯಾಂಕ್​” ಕೂಡ ಇದೆ. ಇದಲ್ಲದೆ ಸಂಸ್ಥೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶ, ಕೊಳಗೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ತೆರಳಿ ಜನರ ನೇತ್ರ ತಪಾಸಣೆ ನಡಸಿ ಸಮಸ್ಯೆ ಇರುವವರನ್ನು ಆಸ್ಪತ್ರೆಗೆ ಕರೆ ತಂದು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com