ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 7 ದಿನಗಳಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಕಂಡು ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 7 ದಿನಗಳಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಕಂಡು ಬಂದಿದೆ.

ಜಿಲ್ಲೆಯಲ್ಲಿ ಕಳೆದ 7 ದಿನಗಳಲ್ಲಿ 7 ಪ್ರಕರಣಗಳು ಕಂಡು ಬಂದಿದೆ. 7 ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಮಗುವಿನ ಮೇಲೆ ಒಂದಕ್ಕಿಂತ ಹೆಚ್ಚು ಮಂದಿ ದೌರ್ಜನ್ಯವೆಸಗಿರುವುದು ಕಂಡು ಬಂದಿದೆ. ಮತ್ತೊಂದು ಪ್ರಕರಣದಲ್ಲಿ 2 ವರ್ಷದ ಮಗುವಿನ ಮೇಲೆ ದೌರ್ಜನ್ಯ ನಡೆದಿರುವುದು ವರದಿಯಾಗಿದೆ.

ಪ್ರಸ್ತುತ ಪತ್ತೆಯಾಗಿರುವ ಶೇ.70-80 ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಮೊಬೈಲ್ ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಅಪ್ರಾಪ್ತ ಮಕ್ಕಳನ್ನು ಸಂಪರ್ಕಿಸಿರುವುದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅವರ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಆನ್ ಲೈನ್ ಕ್ಲಾಸ್ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮೊಬೈಲ್ ಫೋನ್ ಗಳು ಹಾಗೂ ಗ್ಯಾಜೆಟ್ ಗಳನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಗ್ಯಾಜೆಟ್ ಗಳನ್ನು ಬಳಕೆ ಮಾಡುವ ಮಕ್ಕಳು ಕೇವಲ ತರಗತಿಗಳಿಗಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಪೋಷಕರಿಗೇ ತಿಳಿಯದಂತೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯುತ್ತಿದ್ದಾರೆ. ಮಕ್ಕಳು ಖಾತೆ ತೆರೆಯುತ್ತಿದ್ದಂತೆಯೇ ಯುವಕರು ಅವರನ್ನು ಪರಿಚಯ ಮಾಡಿಕೊಂಡು, ಗೆಳೆತನ, ಪ್ರೀತಿಯೆಂದು ಸಂಪರ್ಕ ಬೆಳೆಸುತ್ತಿದ್ದಾರೆ. ಇದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಕ್ಷಿತ್ ಎಂಬುವವರು ಮಾತನಾಡಿ, ಕೆಲ ಪ್ರಕರಣಗಳಲ್ಲಿ ಮಕ್ಕಳು ಗರ್ಭಿಣಿಯರಾದ ಬಳಿಕವೇ ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದಾಖಲಾಗುತ್ತಿರುವ ಪ್ರಕರಣಗಳು ಬೆರಳೆಣಿಕೆಷ್ಟು ಅಷ್ಟೇ. ಸಮಾಜಕ್ಕೆ ಹೆದರಿ ಸಾಕಷ್ಟು ಮಂದಿ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ದೂರು ದಾಖಲಿಸಿದ ಬಳಿಕ ಸಮುದಾಯದ ಒತ್ತಡದಿಂದ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರುವುದೂ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜಾ ಮಾತನಾಡಿ, ಸಾಂಕ್ರಾಮಿಕ ರೋಗದ ನಂತರ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, 12-17 ವರ್ಷ ವಯಸ್ಸಿನ ಮಕ್ಕಳು ಹೆಚ್ಚು ಬಲಿಪಶುಗಳಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಮುಂದೆ ಬಂದು ದೂರು ನೀಡುತ್ತಿದ್ದಾರೆಂದು ಹೇಳಿದ್ದಾರೆ.

ಈ ವರ್ಷದ ಮೊದಲ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 66 ಪೋಕ್ಸೊ ಪ್ರಕರಣಗಳು ವರದಿಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಕಳೆದ 2 ತಿಂಗಳಿನಲ್ಲಿ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗುತ್ತಿರುವುದು ಕಂಡು ಬಂದಿದೆ. ಬಹುತೇಕ ಪ್ರಕರಣಗಳ ಆರೋಪಿಗಳು ಸಂತ್ರಸ್ತರ ಸಂಬಂಧಿಕರು, ನೆರೆಹೊರೆಯವರು ಹಾಗೂ ಪರಿಚಯಸ್ಥ ಜನರೇ ಆಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ತರಲು ತ್ವರಿತಗತಿಯ ಶಿಕ್ಷೆಯು ಅಗತ್ಯವಿದೆ. ಆದರೆ ಪೋಕ್ಸೊ ವಿಶೇಷ ನ್ಯಾಯಾಲಯಗಳು ಶೀಘ್ರಗತಿಯ ನ್ಯಾಯ ನೀಡುವಲ್ಲಿ ವಿಫಲವಾಗುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಯ ಸಂಬಂಧಿಕರು ಹಾಗೂ ಪರಿಚಯಸ್ಥರೇ ಆಗಿರುವುದರಿಂದ ದೂರು ಸಲ್ಲಿಸಿದ ಬಳಿಕ ಸಂತ್ರಸ್ತೆ ಆರೋಪಿಗಳಿಗೆ ಶತ್ರುವಾಗಿರುತ್ತಾಳೆ. ಇದರಿಂದ ಆಕೆಗೆ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com