ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸದಿರಿ; ಆದೇಶ ಪಾಲಿಸುವಂತೆ ಮಾಡುವುದು ನಮಗೆ ಚೆನ್ನಾಗಿ ತಿಳಿದಿದೆ: 'ಹೈ' ಕೆಂಡಾಮಂಡಲ
ಗ್ರಾಮೀಣ ಮತ್ತು ನಗರ ಪ್ರದೇಶ ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಹಂಚಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಆಕ್ರೋಶ ಸ್ಫೋಟವಾಯಿತು.
Published: 09th November 2021 09:24 AM | Last Updated: 09th November 2021 01:54 PM | A+A A-

ಹೈಕೋರ್ಟ್
ಬೆಂಗಳೂರು: ಗ್ರಾಮೀಣ ಮತ್ತು ನಗರ ಪ್ರದೇಶ ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಹಂಚಿಕೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಆಕ್ರೋಶ ಸ್ಫೋಟವಾಯಿತು.
ಅರ್ಜಿದಾರ ಮೊಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ಪೀಠದ ಮುಂದೆ ಕಳೆದ ಆದೇಶದಂತೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಬೇಕಿತ್ತು. ಆದರೆ ಅವರೂ ಹಾಜರಾಗಿರಲಿಲ್ಲ. ಇದರಿಂದ ಪೀಠ ಆಕ್ರೋಶಗೊಂಡಿತು.
ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಾತಿಗೆ ಆದೇಶಿಸಿದ್ದ ಹೊರತಾಗಿಯೂ ಅವರು ಪೀಠದ ಮುಂದೆ ಉಪಸ್ಥಿತರಿರದ್ದಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಕೆಂಡಾಮಂಡಲವಾಗಿದ್ದು, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ನ್ಯಾಯಾಲಯದ ಆದೇಶ ಪಾಲಿಸುವಂತೆ ಮಾಡುವುದು ನಮಗೆ ಚೆನ್ನಾಗಿ ತಿಳಿದಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಬಂಧಿಸಿ ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸುವ ಮೂಲಕ ಸರ್ಕಾರಕ್ಕೆ ಅಪಥ್ಯವಾದ ಆದೇಶವನ್ನು ಹೊರಡಿಸುವಂತೆ ನಮ್ಮನ್ನು ಮಾಡಬೇಡಿ. ಹೈಕೋರ್ಟ್ ಅನ್ನು ಲಘುವಾಗಿ ಪರಿಗಣಿಸಬೇಡಿ” ಎಂಬ ಖಡಕ್ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನ್ಯಾಯಾಲಯ ನೀಡಿತು.
ಇದನ್ನೂ ಓದಿ: ನಮಗೆ ಯಾವುದೇ ಪ್ರಶಸ್ತಿ ಪಡೆಯುವ ಆಸಕ್ತಿ ಇಲ್ಲ: ಪಿಐಎಲ್ ವಜಾ ಮಾಡಿದ ಕರ್ನಾಟಕ ಹೈಕೋರ್ಟ್
ಅಧಿಕಾರಿಯ ಖುದ್ದು ಹಾಜರಾತಿಗೆ ನೀವೇಕೆ ಸೂಚಿಸಿಲ್ಲ? ಅಧಿಕಾರಿಯನ್ನು ಪೊಲೀಸ್ ಮಹಾನಿರ್ದೇಶಕರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ಹೊರಡಿಸಲು ನೀವೇಕೆ ನಮ್ಮನ್ನು ಪ್ರೇರೇಪಿಸುತ್ತಿದ್ದೀರಿ? ನ್ಯಾಯಾಲಯವನ್ನು ಇಷ್ಟು ಲಘುವಾಗಿ ಏಕೆ ಪರಿಗಣಿಸಿದ್ದೀರಿ? ಇದು ಅತ್ಯಂತ ಆಘಾತ ಉಂಟು ಮಾಡಿದೆ” ಎಂದು ನ್ಯಾಯಾಲಯ ತೀವ್ರ ಬೇಸರ ವ್ಯಕ್ತಪಡಿಸಿತು.
“ನ್ಯಾಯಾಲಯದ ಆದೇಶ ಪಾಲಿಸದ ಇಂಥ ನಡತೆಯನ್ನು ನಾನು ಯಾವುದೇ ಹೈಕೋರ್ಟ್‌ನಲ್ಲಿ ನೋಡಿಲ್ಲ. ಅಡ್ವೊಕೇಟ್ ಜನರಲ್ ಅವರು ಮಧ್ಯಾಹ್ನ ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಉತ್ತರಿಸಬೇಕು. ನಿಮ್ಮ (ಹೆಚ್ಚುವರಿ ಸರ್ಕಾರಿ ವಕೀಲರು) ವಾದವನ್ನು ನಾವು ಆಲಿಸುವುದಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಅವರು ನ್ಯಾಯಾಲಯದ ಮುಂದೆ ಹಾಜರಾಗಿ ಪೀಠಕ್ಕೆ ಸಮಸ್ಯೆ ಮಾಡಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. ಅಧಿಕಾರಿಗಳ ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ಮುಂದೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಖಾತರಿಯನ್ನು ಅಡ್ವೊಕೇಟ್ ಜನರಲ್ (ಎಜಿ) ನೀಡಿದ್ದಾರೆ. ಈ ಸಂಬಂಧ ಅಗತ್ಯ ಸುತ್ತೋಲೆ ಹೊರಡಿಸಲು ಸರ್ಕಾರಕ್ಕೆ ಎಜಿ ಸಲಹೆ ಮಾಡಲಿದ್ದು, ನ್ಯಾಯಾಲಯಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಆಕ್ಷೇಪಣೆ ಸಿದ್ಧವಾಗಿದ್ದು, ಅದನ್ನು ರಿಜಿಸ್ಟ್ರಿಗೆ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಆಕ್ಷೇಪಣೆಯನ್ನು ಅರ್ಜಿದಾರರಿಗೆ ನೀಡಲಾಗಿದ್ದು, ಅರ್ಜಿದಾರರು ಎರಡು ವಾರಗಳಲ್ಲಿ ಪ್ರತ್ಯುತ್ತರ ದಾಖಲಿಸಬೇಕು” ಎಂದು ಆದೇಶದಲ್ಲಿ ದಾಖಲಿಸಿಕೊಂಡಿರುವ ಪೀಠವು ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿತು.