ಒಡಿಶಾ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರ ಘಟಕಗಳಿಗೆ ಮಹಾರಾಷ್ಟ್ರ ಮತ್ತು ಒಡಿಶಾದಿಂದ ಕಲ್ಲಿದ್ದಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರ ಘಟಕಗಳಿಗೆ ಮಹಾರಾಷ್ಟ್ರ ಮತ್ತು ಒಡಿಶಾದಿಂದ ಕಲ್ಲಿದ್ದಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಭೇಟಿಯಾಗಿ, ಮಹಾರಾಷ್ಟ್ರದಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಗೆ ಮನವಿ ಮಾಡಿದ್ದೇನೆ. ಅವರು ಕರ್ನಾಟಕಕ್ಕೆ ಹೆಚ್ಚುವರಿ ಕಲ್ಲಿದ್ದಲು ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಒಡಿಶಾದ ಮಂದಕರಿಯಲ್ಲಿನ ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರಕ್ಕೆ ಗುತ್ತಿಗೆ ದೊರೆತಿದೆ. ಕೇಂದ್ರದ ಪರಿಸರ ಅನುಮತಿಯೂ ದೊರೆತಿದೆ. ಶೀಘ್ರವೇ ಗಣಿಗಾರಿಕೆ ಆರಂಭಿಸಲಾಗುವುದು. ಸದ್ಯಕ್ಕೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ. ಗಣಿಗಾರಿಕೆ ಆರಂಭವಾದ‌ ನಂತರ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಲಭ್ಯವಾಗಲಿದೆ. ಮಹಾರಾಷ್ಟ್ರದ ಗಣಿಯಿಂದಲೂ ಅಧಿಕ ಪ್ರಮಾಣದ ಕಲ್ಲಿದ್ದಲು ಪೂರೈಸಲು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ವಿದ್ಯುತ್ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಆರಂಭಿಸಲು ಕೇಂದ್ರದ ಪರಿಸರ ಅನುಮತಿ ಮಾತ್ರವಲ್ಲದೆ, ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ‌ ಪ್ರಾಧಿಕಾರದ ಅನುಮತಿಯೂ ಬೇಕಿದೆ. ಆದರೂ ವಿನಾಕಾರಣ‌ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.

ಮುಂದಿನ ಸಭೆಯಲ್ಲಿ ಯೋಜನೆಗೆ ಅನುಮತಿ ದೊರೆಯುವ ನಿರೀಕ್ಷೆ ಇದೆ. ಗುರುವಾರ ಹಿರಿಯ ವಕೀಲರನ್ನು ಭೇಟಿ ಮಾಡಿ ಕಾವೇರಿ, ಮೇಕೆದಾಟು ಮತ್ತು ಕೃಷ್ಣಾ ನದಿ ವಿವಾದಗಳ ಕುರಿತು ಚರ್ಚೆ ನಡೆಸುತ್ತೇನೆ. ಒಡಿಶಾದ ಮಂದಕರಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿ ಸಿಕ್ಕಿದೆ. ಮಂದಕರಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸಬಹುದಾಗಿದೆ. ಗಣಿಗಾರಿಕೆ ನಡೆಸಲು ನಾವು ಎಲ್ಲ ಸಿದ್ಧತೆ ಮಾಡಿಕೊಳ್ತಿದ್ದೇವೆ. ರಾಜ್ಯದಲ್ಲಿ ವಿದ್ಯುತ್ ಅಭಾವ ಇಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಹಿರಿಯ ರಾಜಕೀಯ ನಾಯಕರು ಹಾಗೂ ಅವರ ಕುಟುಂಬಸ್ಥರು ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ. ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಯಾವುದೇ ಆರೋಪ ಮಾಡುವುದಕ್ಕೂ ಮುನ್ನ ಸಾಕ್ಷ್ಯಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ.

ಈಗಾಗಲೇ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ತನಿಖೆಗೆ ನೀಡಲಾಗಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ನಾವು ಸಿದ್ಧರಿದ್ದೇವೆಂದು ಬಹಿರಂಗವಾಗಿ ಹೇಳಿದ್ದೇವೆ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com