ಬೆಂಗಳೂರಲ್ಲಿ ಇಂದು ಕೂಡ ಮುಂದುವರಿದ ಜಿಟಿಜಿಟಿ ಮಳೆ: ಆರೆಂಜ್ ಅಲರ್ಟ್ ಘೋಷಣೆ
ನವೆಂಬರ್ ತಿಂಗಳ ದೀಪಾವಳಿ ಕಳೆದು ಇನ್ನೇನು ಚುಮು ಚುಮು ಚಳಿ ಆರಂಭವಾಗಬೇಕೆನ್ನುವಷ್ಟರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ.
Published: 12th November 2021 08:13 AM | Last Updated: 12th November 2021 01:53 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನವೆಂಬರ್ ತಿಂಗಳ ದೀಪಾವಳಿ ಕಳೆದು ಇನ್ನೇನು ಚುಮು ಚುಮು ಚಳಿ ಆರಂಭವಾಗಬೇಕೆನ್ನುವಷ್ಟರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಮನೆಯಲ್ಲಿ ಕುಳಿತು ಕಚೇರಿ ಕೆಲಸ ಮಾಡಲು ಸಾಧ್ಯವಿರುವವರು ಬಿಸಿ ಬಿಸಿ ಕಾಫಿ-ಟೀ ಹೀರುತ್ತಾ ಬೆಚ್ಚಗೆ ಮನೆಯೊಳಗಿದ್ದರೆ ಕಚೇರಿಗಳಿಗೆ, ಹೊರಗೆ ಕೆಲಸಗಳಿಗೆ ಹೋಗಬೇಕಾದವರು, ಶಾಲೆ-ಕಾಲೇಜುಗಳಿಗೆ ಹೋಗಬೇಕಾದ ಮಕ್ಕಳಿಗೆ ಮಳೆಯಲ್ಲಿಯೇ ಜರ್ಕಿನ್, ಸ್ವೆಟರ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 18 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇನ್ನೂ ಮೂರು ದಿನಗಳವರೆಗೆ ಇದೇ ರೀತಿ ತುಂತುರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಜೊತೆಗೆ ಚಳಿಯೂ ಇದ್ದು ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಂಗಳೂರಲ್ಲಿ ಆರೆಂಜ್ ಅಲರ್ಟ್: ಇನ್ನು ಮೂರ್ನಾಲ್ಕು ದಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರಿಯಲಿದ್ದು ವಾಹನ ಸವಾರರು ವಾಹನ ಚಲಾಯಿಸುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಈ ತುಂತುರು ಮಳೆ ಉಂಟಾಗುತ್ತಿದ್ದು, ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆಯ ಅಬ್ಬರಕ್ಕೆ ತಮಿಳುನಾಡಿನಲ್ಲಿ 14 ಜನರು ಮೃತಪಟ್ಟಿದ್ದಾರೆ.
ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನು ರಾಜ್ಯದ ಕರಾವಳಿ ಜಿಲ್ಲೆ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ.