ಬಸ್ಸಿನಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ಜೋರಾಗಿ ಹಾಡು ಹಾಕಿದ್ರೆ ಕೆಳಗಿಳಿಸುತ್ತಾರೆ ಹುಷಾರ್!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್ ಸ್ಪೀಕರ್‌ಗಳಲ್ಲಿ...
Published: 12th November 2021 05:56 PM | Last Updated: 12th November 2021 06:19 PM | A+A A-

ಕೆಎಸ್ ಆರ್ ಟಿಸಿ ಬಸ್ ಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಸಾರಿಗೆ ಇಲಾಖೆ ಬಸ್‌ನಲ್ಲಿ ಪ್ರಯಾಣಿಕರಿಗೆ ಮೊಬೈಲ್ ತಲೆನೋವು ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಈ ಆದೇಶ ಹೊರಡಿಸಿದೆ.
ಕೆಲವರು ಬಸ್ಸಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರ ಕಡೆಗೆ ಗಮನ ಕೊಡದೆ ತಮ್ಮಿಷ್ಟದಂತೆ ಜೋರಾಗಿ ಹಾಡು, ಸಿನಿಮಾ, ವಾರ್ತೆ ಮೊದಲಾದ ಆಡಿಯೋ ಅಥವಾ ವಿಡಿಯೋಗಳನ್ನು ಜೋರಾಗಿ ಹಾಕುವುದರಿಂದ ಇತರರಿಗೆ ಕಿರಿಕಿರಿಯಾಗುತ್ತದೆ. ಇದನ್ನು ತಪ್ಪಿಸುವಂತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಿಸುವಂತೆ ತುಮಕೂರಿನ ವಕೀಲ ರಮೇಶ್ ನಾಯಕ್ ಎಲ್. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು.
ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989, ನಿಯಮ 94 (1)(ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯ ನಿರತ ಸಿಬ್ಬಂದಿ ಸೂಕ್ತ ತಿಳುವಳಿಕೆ ನೀಡಬೇಕು. ಹೆಚ್ಚಾಗಿ ಶಬ್ದ ಬರುವಂತೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುತ್ತಿದ್ದರೆ, ಬಳಸದಂತೆ ವಿನಂತಿಸಿಕೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಬಸ್ಸಿನಿಂದ ಆ ಪ್ರಯಾಣಿಕನನ್ನು ಇಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲೇ ನಿಲ್ಲಿಸುವುದು ಹಾಗೂ ಕೆಳಕ್ಕಿಳಿಸಲ್ಪಡುವ ಪ್ರಯಾಣಿಕಗೆ ಬಸ್ ದರವನ್ನು ಹಿಂತಿರುಗಿಸುವಂತಿಲ್ಲವೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಲ್ಲದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೂ ನಿಯಮ ಜಾರಿಗೆ ತರುವಂತೆ ರಾಜ್ಯ ಸಾರಿಗೆ ಇಲಾಖೆ ಪತ್ರ ಬರೆದಿದೆ.