ಶೀಘ್ರದಲ್ಲೇ ಕೆಜಿಎಫ್‌ನಲ್ಲಿ ರಾಜ್ಯದ ಅತಿ ದೊಡ್ಡ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆ

ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) ನಲ್ಲಿ ಬಳಕೆಯಾಗದ 3,500 ಎಕರೆ ಖಾಲಿ ಜಾಗವನ್ನು ಕೈಗಾರಿಕಾ ಟೌನ್‌ಶಿಪ್ ಆಗಿ ಪರಿವರ್ತಿಸಲು ಇನ್ನೆರಡು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಕೆಜಿಎಫ್
ಕೆಜಿಎಫ್

ಬೆಂಗಳೂರು: ಕೋಲಾರ ಗೋಲ್ಡ್ ಫೀಲ್ಡ್(ಕೆಜಿಎಫ್) ನಲ್ಲಿ ಬಳಕೆಯಾಗದ 3,500 ಎಕರೆ ಖಾಲಿ ಜಾಗವನ್ನು ಕೈಗಾರಿಕಾ ಟೌನ್‌ಶಿಪ್ ಆಗಿ ಪರಿವರ್ತಿಸಲು ಇನ್ನೆರಡು ಮೂರು ವಾರಗಳಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ. ಇದು ಸಾಕಾರಗೊಂಡರೆ ಕರ್ನಾಟಕದ ಅತಿ ದೊಡ್ಡ ಕೈಗಾರಿಕಾ ಕೇಂದ್ರವಾಗಲಿದೆ.

ಈ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಆಗಸ್ಟ್‌ನಲ್ಲಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಬೆಂಗಳೂರಿನಿಂದ 100 ಕಿಮೀ ದೂರದಲ್ಲಿರುವ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ ಕಾರ್ಯಾಚರಣೆಯನ್ನು 2001ರಲ್ಲಿಯೇ ಸ್ಥಗಿತಗೊಳಿಸಲಾಗಿದೆ.

ಒಟ್ಟು 16,000 ಎಕರೆಯಲ್ಲಿ ಗಣಿಗಾರಿಕೆ ನಡೆಸಲಾಗಿದ್ದು, ಅದರಲ್ಲಿ 3,500 ಎಕರೆ ಭೂಮಿ ಬಳಕೆಯಾಗದೆ ಹಾಗೆ ಇದೆ ಎಂದು ನಿರಾಣಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ಪರಿಶೋಧನೆಯ ನಂತರ ಅಲ್ಲಿ ಚಿನ್ನವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ನಾವು ಅದನ್ನು(3,500 ಎಕರೆ) ಉತ್ತಮ ಉದ್ದೇಶಗಳಿಗಾಗಿ ಬಳಸಲು ಬಯಸಿದ್ದೇವೆ. ಈ ಸಂಬಂಧ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದಾಗ, ಅವರು ಮತ್ತೊಂದು ಪರಿಶೋಧನೆ ನಡೆಸಿದರು. ಆದರೆ ಅವರಿಗೂ ಚಿನ್ನ ಕಂಡುಬಂದಿಲ್ಲ” ಎಂದು ಸಚಿವರು ಹೇಳಿದ್ದಾರೆ.

ಟೌನ್‌ಶಿಪ್‌ಗೆ ಸೂಕ್ತವಾದ ಭೂಮಿಯನ್ನು ಗುರುತಿಸಲು ರಾಜ್ಯ ಸರ್ಕಾರವು ಸಮೀಕ್ಷೆ ನಡೆಸಿದ ನಂತರ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅನುಮತಿ ನೀಡಲಿದೆ ಎಂದು ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. 15 ದಿನಗಳಲ್ಲಿ ನಮ್ಮ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬಳಿಕ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಲು ಈ ಭೂಮಿಯನ್ನು ಬಳಸಿಕೊಳ್ಳಲು ಕೇಂದ್ರ ಈಗಾಗಲೇ ಹಸಿರು ನಿಶಾನೆ ತೋರಿದೆ. ನಾವು ಆದಷ್ಟು ಬೇಗ ಪ್ರಾರಂಭಿಸುತ್ತೇವೆ ಎಂದು ನಿರಾಣಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com