ಬಿಟ್‌ಕಾಯಿನ್ ಹಗರಣ: ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ- ಗೃಹ ಸಚಿವ ಆರಗ ಜ್ಞಾನೇಂದ್ರ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಗದ್ದಲ ಮುಂದುವರೆದಿದ್ದು, ನಮ್ಮ ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ ಯಾರನ್ನೂ ರಕ್ಷಿಸುತ್ತಿಲ್ಲ. ಯಾವುದೇ ರೀತಿಯ ತನಿಖೆಗೂ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಗದ್ದಲ ಮುಂದುವರೆದಿದ್ದು, ನಮ್ಮ ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ ಯಾರನ್ನೂ ರಕ್ಷಿಸುತ್ತಿಲ್ಲ. ಯಾವುದೇ ರೀತಿಯ ತನಿಖೆಗೂ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ರಾಜ್ಯದ ಗೃಹ ಸಚಿವರು ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಹಾಗೂ ವಿರೋಧ ಪಕ್ಷಗಳ ಆರೋಪಗಳ ಕುರಿತು ಮಾತನಾಡಿದ್ದಾರೆ.

ಸರ್ಕಾರದ ವಿರುದ್ಧದ ಪ್ರಕರಣ ಮತ್ತು ಆರೋಪಗಳ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ಪರಿಶೀಲಿಸಿದ್ದೇನೆ. ಈ ವಿಚಾರದಲ್ಲಿ ಯಾವುದೇ ಸತ್ಯತೆಗಳೂ ಇಲ್ಲ. ಆರೋಪಿ ಶ್ರೀಕೃಷ್ಣನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದಾಗ ಆತ ಹ್ಯಾಕರ್ ಎಂಬುದು ಪತ್ತೆಯಾಗಿತ್ತು. ಆತ ಹಲವಾರು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿಕೆಗಳನ್ನು ನೀಡಿದ್ದ. ಇದರಲ್ಲಿ ಅಂತರರಾಷ್ಟ್ರೀಯ ಬ್ಯಾಂಕ್ ಕೂಡ ಇದೆ ಎಂದು ಹೇಳಿದ್ದ. ಈ ಹೇಳಿಕೆಯನ್ನು ನಂಬಿದ್ದ ಪೊಲೀಸರು ಉತ್ಸಾಹದಲ್ಲಿ ವಿಚಾರಣೆ ವೇಳೆ ಆರೋಪಿ 31 ಬಿಟ್‌ಕಾಯಿನ್‌ಗಳನ್ನು ತೋರಿಸಿದ್ದಾನೆಂದು ಹೇಳಿದ್ದಾರೆ.

ಇದೊಂದು ತಾಂತ್ರಿಕ ಪ್ರಕರಣವಾದ್ದರಿಂದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರ ನೆರವು ಪಡೆದಿದ್ದೇವೆ. ವರ್ಗಾವಣೆಗೆ ಮುಂದಾದಾಗ ವಿನಿಮಯಕ್ಕೆ ಸೇರಿದ ವ್ಯಾಲೆಟ್‌ನಲ್ಲಿ 186 ಬಿಟ್‌ಕಾಯಿನ್‌ಗಳಿರುವುದು ಕಂಡು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಪ್ರಗತಿ ಕುರಿತು ಪ್ರತಿಯೊಂದನ್ನೂ ದಾಖಲಿಸಿಕೊಳ್ಳಲಾಗುತ್ತಿದೆ. ತಜ್ಞರು ಶ್ರೀಕಿಯನ್ನು ನಂಬಲು ಸಾಧ್ಯವಿಲ್ಲ. ಆತ ಬೋಗಸ್ ವ್ಯಕ್ತಿ ಎಂದು ಹೇಳಿದ್ದಾರೆ. ಶ್ರೀಕಿ ಪೊಲೀಸರಿಗೆ ತಪ್ಪು ಮಾಹಿತಿಗಳನ್ನೂ ನೀಡುತ್ತಿದ್ದು, ಅವರ ಹಾದಿಯನ್ನು ತಪ್ಪಿಸುತ್ತಿದ್ದಾನೆ. ವಿಚಾರಣೆ ವೇಳೆ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ. 2018ರಲ್ಲಿ ಯುಬಿ ಸಿಟಿಯಲ್ಲಿ ನಡೆದ ಘಟನೆ ಕೂಡ ಬಿಟ್‌ಕಾಯಿನ್‌ಗಳಿಗೆ ಸಂಬಂಧಿಸಿದೆ. ಆ ಪ್ರಕರಣದ ಆರೋಪಪಟ್ಟಿಯಲ್ಲಿ ಈತನ ಹೆಸರಿತ್ತು, ಆದರೆ ಆ ವೇಳೆ ಶ್ರೀಕಿಯನ್ನು ವಿಚಾರಣೆ ನಡೆಸಿರಲಿಲ್ಲ.

ಪ್ರಕರವನ್ನು ಇಡಿ ಮತ್ತು ಸಿಬಿಐ ಇಂಟರ್‌ಪೋಲ್ ಘಟಕಕ್ಕೆ ಯಾವಾಗ ವರ್ಗಾಯಿಸಲಾಗಿತ್ತು?
ಪ್ರಕರಣ ದಾಖಲಾದ ಬಳಿಕ ಜಾರಿ ನಿರ್ದೇಶನಾಲಯ (ಇಡಿ) ಪ್ರಸಕ್ತ್ ಸಾಲಿನ ಮಾರ್ಚ್ 15 ರಂದು ರಾಜ್ಯಕ್ಕೆ ಪತ್ರ ಬರೆದಿತ್ತು. ಬಳಿಕ ಪೊಲೀಸ್ ಆಯುಕ್ತರು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಪ್ರತಿಕ್ರಿಯೆ ಏಪ್ರಿಲ್ 3 ರಂದು ಶ್ರೀಕೃಷ್ಣನ ಬಂಧನ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕಿಂಗ್  ಕುರಿತ ಹೇಳಿಕೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು  ನೀಡಿದ್ದರು.

ಈ ಎಲ್ಲಾ ಮಾಹಿತಿಗಳನ್ನು ತನಿಖೆ ವೇಲೆ ಅಧಿಕಾರಿಗಳು ತೆಗದುಕೊಳ್ಳಬಹುದಾಗಿದೆ. ಏಪ್ರಿಲ್ 28 ರಂದು ಕೇಂದ್ರೀಯ ತನಿಖಾ ಘಟಕಕ್ಕೂ ಪತ್ರ ಬರೆದಿದ್ದೇವೆ ಮತ್ತು ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾಕಿಂಗ್ ಕುರಿತು ಮಾಹಿತಿ ನೀಡಲಾಗಿದೆ. ಅದನ್ನು ಗಮನಿಸುವಂತೆಯೂ ಮನವಿ ಮಾಡಿಕೊಂಡಿದ್ದೇವೆ. ಪ್ರಕರಣದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ನಾವು ಏನನ್ನೂ ಮುಚ್ಚಿಡುತ್ತಿಲ್ಲ. ತನಿಖೆ ವೇಳೆ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸುತ್ತಿದ್ದೇವೆ ಮತ್ತು ಎಲ್ಲವನ್ನೂ ಪಾರದರ್ಶಕವಾಗಿ ಮಾಡುತ್ತಿದ್ದೇವೆ ಇದರಿಂದ ಎಲ್ಲಾ ಏಜೆನ್ಸಿಗಳು ವಿಚಾರಣೆಗಳನ್ನು ನಡೆಸಬಹುದು. ಆರೋಪಿ ಶ್ರೀಕೃಷ್ಣನನ್ನು ಬಂಧಿಸುವ ಮೂಲಕ ಹಗರಣವನ್ನು ಬಯಲಿಗೆ ತಂದಿದ್ದೇವೆ. ನವೆಂಬರ್ 30, 2020 ರಂದು ಬೆಂಗಳೂರಿನ IISc ಯಿಂದ ತಜ್ಞರ ಸಹಾಯವನ್ನು ಕೇಳಿದ್ದೇವೆ, ಪೊಲೀಸರ ತನಿಖೆಗೆ ಇದು ಸಹಾಯ ಮಾಡಲಿದೆ.

ಪ್ರಕರಣದಲ್ಲಿ ಏನೂ ಇಲ್ಲ ಎಂದಾದರೆ, ಇತ್ತೀಚಿನ ಭೇಟಿಯ ವೇಳೆ ಸಿಎಂ ಬೊಮ್ಮಾಯಿ ಏಕೆ ಪ್ರಧಾನಿ ಮೋದಿ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು?
ಈ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾದ ಕಾರಣ, ಅವರು (ಸಿಎಂ) ಪ್ರಧಾನಿಯೊಂದಿಗಿನ ಭೇಟಿಯ ಸಮಯದಲ್ಲಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸರ್ಕಾರದ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳ ಬಗ್ಗೆ ನಾವು ಅವರಿಗೆ (ಪಿಎಂ) ಹೇಳಬೇಕು. ಹೀಗಾಗಿ ಹೇಳಿದ್ದಾರೆ. ಮಾತುಕತೆ ವೇಳೆ ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಿ ಎಂದು ಮೋದಿಯವರು ಬೊಮ್ಮಾಯಿಗೆ ಸೂಚಿಸಿದ್ದಾರೆ.

ತನಿಖೆಯಲ್ಲಿ ಹಲವಾರು ಲೋಪಗಳಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆತನಿಗೆ ಪೊಲೀಸರೇ ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಲಾಗಿದೆ?
ಇಂತಹ ಆರೋಪಗಳು ಬಂದ ನಂತರ ನ್ಯಾಯಾಲಯವು ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತ್ತು ಮತ್ತು ವರದಿಯು ನೆಗೆಟಿವ್ ಬಂದಿದೆ. ಈ ಪ್ರಕರಣದ ಸತ್ಯಾಸತ್ಯತೆ ಹೊರತರಲು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ನಮ್ಮ ಸರ್ಕಾರ ಯಾವುದೇ ತನಿಖೆಗೆ ಮುಕ್ತವಾಗಿದೆ. ಪ್ರಕರಣದಲ್ಲಿ ಏನೂ ಇಲ್ಲದಿರುವಾಗ ಯಾಕಿಷ್ಟು ದೊಡ್ಡದಾಗುತ್ತಿದೆ ಎಂಬುದೇ ನನಗೆ ಆಶ್ಚರ್ಯವಾಗುತ್ತಿದೆ. ಇದು ರಾಜಕೀಯ ಕಾರಣಗಳಿಂದಲೂ ಇರಬಹುದು.

2018ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಶ್ರೀಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿದಾಗ ಕ್ರಮ ಕೈಗೊಳ್ಳಲು ವಿಫಲವಾಗಿತ್ತು. 2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅವರನ್ನು ಬಂಧಿಸಿದಾಗ ಎಲ್ಲಾ ವಿವರಗಳು ಹೊರಬಂದವು. ಎರಡೂ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರ ಪುತ್ರರು ಭಾಗಿಯಾಗಿದ್ದಾರೆ.

ಹಗರಣದಲ್ಲಿ ಕಾಂಗ್ರೆಸ್ ಮುಖಂಡರ ಪುತ್ರರೇ ಶಾಮೀಲಾಗಿದ್ದಾರೆ ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಏಕೆ?
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರಕರಣ ದಾಖಲಾಗಿತ್ತು. ಅವರು ಕ್ರಮ ಕೈಗೊಳ್ಳಬೇಕಿತ್ತು. ಇದೀಗ ಪ್ರಕರಣ ಸಂಬಂಧ ನಾವು ವಿವರವಾದ ತನಿಖೆ ನಡೆಸುತ್ತಿದ್ದೇವೆ. ಈವರೆಗೂ ಏಳೆಂಟು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಆರೋಪಿಗಳು ವಶದಲ್ಲಿದ್ದಾರೆ. 2015-16ರಿಂದಲೂ ಹ್ಯಾಕ್ ಮಾಡುತ್ತಿರುವುದಾಗಿ ಶ್ರೀಕಿ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ವ್ಯವಸ್ಥೆಯನ್ನು ಬಲಪಡಿಸಲು ತಜ್ಞರನ್ನು ಸಂಪರ್ಕಿಸುವ ಚಿಂತನೆಗಳಿವೆಯೇ?
ಖಂಡಿತವಾಗಿಯೂ ಹೌದು, ತಜ್ಞರ ಸಹಾಯವನ್ನು ತೆಗೆದುಕೊಳ್ಳುವ ಅಗತ್ಯವನ್ನು ಇದೀಗ ಅರಿತುಕೊಂಡಿದ್ದೇವೆ. ಈ ಬಗ್ಗೆ ಚಿಂತನೆ ನಡೆಸುತ್ತಿದ್ದು, ಮುಖ್ಯಮಂತ್ರಿಗಳ ಜೊತೆಗೂ ಚರ್ಚಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com