ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ತಮ್ಮ ವಿವಿಧ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಒತ್ತಾಯಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಸೋಮವಾರ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಮುಂದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಒತ್ತಾಯಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಸೋಮವಾರ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕದಲ್ಲಿ ಗೌರವ ಧನ ಪಾವತಿ ಮಾಡಬೇಕು ಮತ್ತು ಕೆಲಸದ ಅವಧಿಯನ್ನು ಸೀಮಿತಗೊಳಿಸಬೆಕು ಎಂಬ ಹಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಜೀವದ ಹಂಗು ತೊರೆದು, ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಇದರ ಜೊತೆಗೆ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಹಾರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳನ್ನೂ ಸಹ ಮಾಡಬೇಕಾಗಿದೆ.

ಈ ಕೆಳಗಿನ ಸಮಸ್ಯೆಗಳಿಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನೆ ಮೂಲಕ ಮನವಿ ಮಾಡಲಾಗಿದೆ.

ಪ್ರಮುಖ ಹಕ್ಕೊತ್ತಾಯಗಳು
1. ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದೊಳಗೆ ರಾಜ್ಯ ಹಾಗೂ ಕೇಂದ್ರದ ಪ್ರೋತ್ಸಾಹಧನ ಆಶಾಗಳಿಗೆ ದೊರೆಯುವಂತೆ ಮಾಡಿ.
2. ಆಶಾಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಆಕೆ ಕೆಲಸ ಮಾಡಬೇಕು. ಬೇರೆ ಪ್ರದೇಶಗಳಿಗೆ ನಿಯೋಜಿಸಬಾರದು ಎನ್ನುವ ಆದೇಶ ಪಾಲನೆ ಮಾಡಿ
3. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅವರಿಗೆ ನಿಗದಿಪಡಿಸಿರುವ ಹೆಚ್ಚಿನ ಜನ ಸಂಖ್ಯೆಗೆ ಹಾಗೂ ಬೆಂಗಳೂರಂತಹ ಮಹಾನಗರದ ಜೀವನ ಮಟ್ಟಕ್ಕೆ ಅನುಗುಣವಾಗಿ ಅವರ ಮಾಸಿಕ ಗೌರವಧನ ರೂ. 5000/- ಹೆಚ್ಚಳ ಮಾಡಿ,
4. ಇಲಾಖೆಯ ಆದೇಶಗಳಂತೆ ಎನ್‌ಸಿಡಿ ಸರ್ವೆ, ಕ್ವಾರಂಟೈನ್ ಅಪ್ ಮೂಲಕ ಕೆಲಸ, ಈ-ಸಮೀಕ್ಷೆ ಕೆಲಸಗಳನ್ನು ಆಶಾಗಳಿಂದ ಒತ್ತಾಯ ಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಿ.
5. ಇಲಾಖೆಯ ಸುತ್ತೋಲೆಗಳಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕ್ರೈಮ್ ರಿಪೋರ್ಟ್ ಮತ್ತು ರಿಲೀಸ್ ಕಾಪಿಗಳನ್ನು ಕಡ್ಡಾಯವಾಗಿ ನೀಡಿ.
6. ಆರ್.ಸಿ.ಹೆಚ್ ಪೋರ್ಟಲ್‌ನಲ್ಲಿ ಎ.ಎನ್.ಸಿ. ಹಾಗೂ ಪಿ.ಎನ್.ಸಿ ಇನ್ನಿತರ ಹಲವು ಆಶಾ ಕೆಲಸಗಳು ಡಾಟಾ ಎಂಟ್ರಿ ಆಗುತ್ತಿಲ್ಲ. ಇದರಿಂದಾಗಿ ಆಶಾಗಳಿಗೆ ಕೆಲಸ ಮಾಡಿದಷ್ಟು ಪ್ರೋತ್ಸಾಹ ಧನ ಸಿಗುತ್ತಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಿ
7. ಆಶಾ ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳು ಅವರ ಜನ ಸಂಖ್ಯೆ (2,500) ವ್ಯಾಪ್ತಿಯನ್ನು ಮೀರದಂತೆ ಕ್ರಮ ವಹಿಸಿ
8. ಕಫ ಪರೀಕ್ಷೆ ಸ್ಯಾಂಪಲ್ ತರಲು ಎಲ್ಲಾ ಕಡೆ ಆಶಾಗಳಿಗೆ ಒತ್ತಾಯಿಸಲಾಗುತ್ತಿದೆ. ಸುತ್ತೋಲೆಯಲ್ಲಿರುವಂತೆ ಆಶಾಗಳದ್ದಲ್ಲದ ಈ ಕೆಲಸವನ್ನು ಅವರಿಂದ ಮಾಡಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ(ಸುತ್ತೋಲೆ ದಿ: 29-06-2016 & 30-11-2019 ಮಾನ್ಯ ಯೋಜನಾ ನಿರ್ದೇಶಕರು(ಆರ್ ಸಿ ಹಚ್) ಬೆಂಗಳೂರು)
9. ಮೂರು ತಿಂಗಳಿಗೊಮ್ಮೆ ಆಶಾ ಕಾರ್ಯಕರ್ತೆಯರ ಕುಂದುಕೊರತೆ ನಿವಾರಣಾ ಸಭೆಯನ್ನು ಸಂಘಟಿಸುವುದರ ಬಗ್ಗೆ ಆದೇಶವಿದ್ದು, ಅದರ ಬಗ್ಗೆ ಈ ಕೂಡಲೇ ಕ್ರಮ ಕೈಗೊಳ್ಳಿ.
10. ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಿ.
11. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗೌಸ್, ಫೇಸ್ ಶೀಲ್ಡ್ ಗಳನ್ನು ನಿಯಮಿತವಾಗಿ ನೀಡುಂತೆಯೂ ಆಗ್ರಹಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com