ನಗರದಲ್ಲಿ ನಿನ್ನೆ 40.2 ಎಂಎಂ ಮಳೆ: ಇನ್ನೂ 3 ದಿನ ಮಳೆಯ ಎಚ್ಚರಿಕೆ
ಕಳೆದ 4-5 ದಿನದಿಂದ ನಗರದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಮೈ ಕೊರೆಯೋ ಚಳಿಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿ ಹೋಗಿದ್ದು, ಇದರ ನಡುವೆ ನಿನ್ನೆ ಸಂಜೆ ಸುರಿದ ಭಾರೀ ಮಳೆ ರಾಜಧಾನಿಯಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ.
Published: 16th November 2021 10:26 AM | Last Updated: 16th November 2021 02:25 PM | A+A A-

ಮಳೆಯಲ್ಲಿ ನಗರದ ರಸ್ತೆಯಲ್ಲಿ ನಡೆದು ಹೋಗುತ್ತಿರುವ ಇಬ್ಬರು ವ್ಯಕ್ತಿಗಳು.
ಬೆಂಗಳೂರು: ಕಳೆದ 4-5 ದಿನದಿಂದ ನಗರದಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಮೈ ಕೊರೆಯೋ ಚಳಿಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿ ಹೋಗಿದ್ದು, ಇದರ ನಡುವೆ ನಿನ್ನೆ ಸಂಜೆ ಸುರಿದ ಭಾರೀ ಮಳೆ ರಾಜಧಾನಿಯಲ್ಲಿ ಅವಾಂತರಗಳನ್ನೇ ಸೃಷ್ಟಿಸಿದೆ.
ನಗರದಲ್ಲಿ ನಿನ್ನೆ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದ್ವು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿತ್ತು. ಇನ್ನೂ 2 ರಿಂದ 3 ದಿನ ಕೂಡ ಇದೇ ಪರಿಸ್ಥಿತಿ ಇರಲಿದ್ದು, ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮುಂದಿನ 2 ದಿನ ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ 2 ದಿನ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
5 ದಿನ ಸಾಧಾರಣ ಮಳೆಯಾಗಲಿದೆ. ಹೀಗಾಗಿ ಬೆಂಗಳೂರಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕಳೆದ 4-5 ದಿನದಿಂದ ಜಿಟಿ ಜಿಟಿ ಮಳೆಯಿಂದ ಬೇಸತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಒಮ್ಮೆಲೇ ಸುರಿದ ಭಾರೀ ಮಳೆ ಅವಾಂತರಗಳನ್ನ ತಂದೊಡ್ಡಿದೆ. ಒಂದು ಕಡೆ ಮೈ ಕೊರೆಯೋ ಚಳಿ, ಮತ್ತೊಂದೆಡೆ ಜಿಟಿ ಜಿಟಿ ಮಳೆ ವೇಗ ಪಡೆದುಕೊಂಡು ಆರ್ಭಟಿಸಿ ಅವಾಂತರ ಸೃಷ್ಟಿಸಿ ಆಘಾತ ನೀಡಿದೆ. ಇದೆಲ್ಲದ್ರಿಂದ ಬೇಸತ್ತಿರುವ ರಾಜಧಾನಿ ಮಂದಿ ಈ ಮಳೆಯಿಂದ ಮುಕ್ತಿ ಯಾವಾಗಪ್ಪ ಎಂದು ಹೇಳುತ್ತಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ನಿನ್ನೆ ನಗರದಲ್ಲಿ 40.2 ಎಂಎಂ ನಷ್ಟು ಮಳೆಯಾಗಿದೆ ಎಂದು ತಿಳಿಸಿದೆ. ಈ ಪೈಕಿ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 21.6 ಎಂಎಂ ಮಳೆಯಾಗಿದೆ ಎಂದು ತಿಳಿಸಿದೆ.
ಭಾರೀ ಮಳೆಯಿಂದಾಗಿ ಬಾಣಸವಾಡಿ ರೈಲ್ವೆ ನಿಲ್ದಾಣದ ಹಿಂಭಾಗ, ಬಾಗಲಕುಂಟೆ, ಗುರಗುಂಟೆಪಾಳ್ಯ, ನೆಲಮಂಗಲ, ತುಮಕೂರು ರಸ್ತೆ, ಕೋರಮಂಗಲ, ರಾಜರಾಜೇಶ್ವರಿ ನಗರ, ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು.
ಹಠಾತ್ ಮಳೆಯಿಂದಾಗಿ ದೂರವಾಣಿ ಸಂಪರ್ಕಗಳಲ್ಲಿ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದ ನಾಗರೀಕರು ಬಿಬಿಎಂಪಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.
ಸಿಮ್ ಕಾರ್ಡ್ ಪಡೆಯುವಂತೆ ನಿಯಂತ್ರಣ ಕೊಠಡಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ, ಇದರಿಂದಾಗಿ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಹಾಯಕವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.
ಹವಾಮಾನ ಇಲಾಖೆಯ ಬೆಂಗಳೂರು ಪ್ರಭಾರಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ಅವರು ಮಾತನಾಡಿ, ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.