ಕುಗ್ರಾಮಗಳಿಗೂ ಉತ್ತಮ ಇಂಟರ್ನೆಟ್ ಸೇವೆ ಒದಗಿಸಲು ಉಪಗ್ರಹ ಸೇವೆ ಬಳಸಲು ಸರ್ಕಾರ ಬದ್ಧ: ಡಾ. ಸಿ ಎನ್ ಅಶ್ವಥ ನಾರಾಯಣ
ಕೈಗಾರಿಕೆಗಳು, ಉದ್ಯಮ, ಐಟಿ-ಬಿಟಿ ವಲಯವನ್ನು ಬೆಂಗಳೂರಿನಿಂದಾಚೆಗೆ ತೆಗೆದುಕೊಂಡು ಹೋಗಬೇಕು ಎಂದು ಕರ್ನಾಟಕ ಸರ್ಕಾರ ಒತ್ತು ನೀಡುತ್ತಿದೆ.
Published: 16th November 2021 10:42 AM | Last Updated: 16th November 2021 01:56 PM | A+A A-

ಬೆಂಗಳೂರಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಕಚೇರಿಯಲ್ಲಿ ಐಟಿ-ಬಿಟಿ ಖಾತೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಬೆಂಗಳೂರು: ಕೈಗಾರಿಕೆಗಳು, ಉದ್ಯಮ, ಐಟಿ-ಬಿಟಿ ವಲಯವನ್ನು ಬೆಂಗಳೂರಿನಿಂದಾಚೆಗೆ ತೆಗೆದುಕೊಂಡು ಹೋಗಬೇಕು ಎಂದು ಕರ್ನಾಟಕ ಸರ್ಕಾರ ಒತ್ತು ನೀಡುತ್ತಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಅತ್ಯಂತ ಕುಗ್ರಾಮಗಳಿಗೂ ಮುಂದಿನ ಎರಡು ವರ್ಷಗಳಲ್ಲಿ ಉತ್ತಮ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ಉಪಗ್ರಹ ಸೇವೆಗಳನ್ನು ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ ಐಟಿ-ಬಿಟಿ ಸಚಿವ ಡಾ ಸಿ ಎನ್ ಅಶ್ವಥನಾರಾಯಣ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಕಚೇರಿಗೆ ಬಂದ ಅವರು ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಐಟಿ-ಬಿಟಿ ವಲಯದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದರು. ಸರ್ಕಾರ ಅಂತರ್ಜಾಲ ಸೇವೆಗೆ ಪ್ರಮುಖ ಆದ್ಯತೆ ನೀಡುತ್ತದೆ. ನಾಗರಿಕ ಪೂರಕ ಸೇವೆಗಳಾದ ಬ್ಯಾಂಕಿಂಗ್, ಕೃಷಿ, ಆರೋಗ್ಯ ಸೇವೆ, ಶಿಕ್ಷಣ, ಆಡಳಿತ, ಮಾಹಿತಿ ತಂತ್ರಜ್ಞಾನ ಮೊದಲಾದವುಗಳು ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೂ ಅತ್ಯಗತ್ಯವಾಗಿದೆ. ಜನರ ಜೀವನಮಟ್ಟ ಸುಧಾರಣೆಯಾಗಲು ಇಂಟರ್ನೆಟ್ ಸಂಪರ್ಕಕ್ಕೆ ಪ್ರಮುಖ ಆದ್ಯತೆಯನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.
ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಬೆಂಗಳೂರು ನಗರದಲ್ಲಿ ಉತ್ತಮ ಸ್ಯಾಟಲೈಟ್ ಸಂಪರ್ಕವನ್ನು ಹೊಂದಿರುತ್ತದೆ. ಆದರೆ ಬೇರೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋದರೆ ಸಂಪರ್ಕ ಕಷ್ಟವಾಗುತ್ತದೆ. ಕರ್ನಾಟಕದಲ್ಲಿ ಶೇಕಡಾ 90ರಷ್ಟು 4ಜಿ ಸಂಪರ್ಕ ಹೊಂದಿರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯ ಸವಾಲಾಗಿರುತ್ತದೆ. ಇದಕ್ಕೆ ಕಾರಣ ಟೆಲಿಕಮ್ಯೂನಿಕೇಷನ್ ಯಾವುದೇ ಇಲಾಖೆಯ ಅಡಿಯಲ್ಲಿರಲಿಲ್ಲ ಎಂದರು.
ಇಂದು ಟೆಲಿಕಮ್ಯೂನಿಕೇಷನ್ ನ್ನು ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ನಾಲಜಿ ಇಲಾಖೆಯ ಅಡಿಯಲ್ಲಿ ತರಲಾಗಿದೆ. ಅಲ್ಲದೆ ಸಿಂಗಲ್ ವಿಂಡೋ ಅಡಿಯಲ್ಲಿ ತರಲಾಗಿದ್ದು ಇದರಿಂದ ಟೆಲಿಕಾಂ ಸೇವಾ ಪೂರೈಕೆದಾರರು ಅಗತ್ಯ ಅನುಮತಿಯನ್ನು ಪಡೆಯಲು ಸುಲಭವಾಗುತ್ತದೆ. ಅವುಗಳಿಗೆ ಸಹಾಯ ಮಾಡಲು ನೀತಿಗಳಿದ್ದು ಅವರ ಜೊತೆ ಸಮಾಲೋಚನೆ ನಡೆಸಿ ರೂಪಿಸಲಾಗಿದೆ ಎಂದರು.
ಕೋವಿಡ್ ಸಮಯದಲ್ಲಿ ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಪೂರೈಕೆದಾರರೊಂದಿಗೆ ಹಲವು ಸಭೆಗಳನ್ನು ನಡೆಸಿದ್ದೇವೆ,ಐಟಿ ಕಂಪನಿಗಳನ್ನು ಯಾವುದೇ ಸ್ಥಳದಿಂದ ಯಾವುದೇ ಸ್ಥಳದಲ್ಲಿ ನಿರ್ವಹಿಸಬಹುದು ಎಂದು ಕೋವಿಡ್ ಲಾಕ್ ಡೌನ್ ಸಮಯತೋರಿಸಿದೆ.
ಟೆಲಿಕಾಂ ಕಂಪನಿಗಳು ತಮ್ಮ ಉಪಗ್ರಹ ಸೇವೆಗಳೊಂದಿಗೆ ಬರುತ್ತಿವೆ, ಅವರಲ್ಲಿ ಹಲವರು ದೂರದ ಸ್ಥಳಗಳಲ್ಲಿ ಉಪಗ್ರಹ ಸೇವೆಗಳನ್ನು ಒದಗಿಸಲು ಮುಂದೆ ಬರುತ್ತಿದ್ದಾರೆ. ಇದು ಪ್ರತಿಯಾಗಿ, ಯಾದಗಿರಿ, ರಾಯಚೂರು ಅಥವಾ ಚಾಮರಾಜನಗರದಂತಹ ಹಿಂದುಳಿದ ಜಿಲ್ಲೆಗಳಲ್ಲಿಯೂ ಸಹ ರಾಜ್ಯದಾದ್ಯಂತ ಎಲ್ಲಿಯಾದರೂ ಮಳಿಗೆ ಸ್ಥಾಪಿಸಲು ಐಟಿ ಕಂಪನಿಗಳನ್ನು ಉತ್ತೇಜಿಸುತ್ತದೆ. ಅದನ್ನು ಆದ್ಯತೆ ಮೇಲೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಾ ಅಶ್ವಥ ನಾರಾಯಣ ಸಂವಾದ ವೇಳೆ ತಿಳಿಸಿದರು.