ಮಿನಿ ವಿಧಾನಸೌಧಕ್ಕೆ ಮರುನಾಮಕರಣ: ಇನ್ಮುಂದೆ 'ತಾಲೂಕು ಆಡಳಿತ ಸೌಧ'

ತಾಲ್ಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ 'ಮಿನಿವಿಧಾನಸೌಧ'ಗಳ ಹೆಸರನ್ನು ಬದಲಾಯಿಸಿ 'ತಾಲೂಕು ಆಡಳಿತ ಸೌಧ' ಎಂದು ಮರುನಾಮಕರಣ ಮಾಡಲಾಗಿದೆ.
ಮಿನಿ ವಿಧಾನಸೌಧ
ಮಿನಿ ವಿಧಾನಸೌಧ

ಬೆಂಗಳೂರು: ತಾಲ್ಲೂಕು ಆಡಳಿತ ಕಛೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ , ನಾಡು - ನುಡಿ ಸಂಸ್ಕೃತಿಗೆ ಪೂರಕವಾಗಿ 'ಮಿನಿವಿಧಾನಸೌಧ'ಗಳ ಹೆಸರನ್ನು ಬದಲಾಯಿಸಿ 'ತಾಲೂಕು ಆಡಳಿತ ಸೌಧ' ಎಂದು ಮರುನಾಮಕರಣ ಮಾಡಲಾಗಿದೆ.

ವಿಧಾನಸೌಧದ ಸ್ಫೂರ್ತಿಯಿಂದ ತಾಲೂಕು ಆಡಳಿತ ಕೇಂದ್ರಗಳಿಗೆ ಮಿನಿ ವಿಧಾನಸೌಧ ಎಂದು ಹಿಂದೆ ಹೆಸರಿಡಲಾಗಿತ್ತು. ಆದರೆ ಇಂಗ್ಲೀಷಿನಲ್ಲಿ 'ಮಿನಿ' ಎಂದರೆ ಚಿಕ್ಕದು ಎಂದರ್ಥ. ತಾಲೂಕು ಆಡಳಿತ ವಿಸ್ತಾರವಾಗಿರುವುದರಿಂದ 'ಮಿನಿ' ಎಂಬ ಪದ ಅದರಲ್ಲಿಯೂ ಇಂಗ್ಲೀಷಿನಲ್ಲಿ ಈ ಪದ ಇರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಕಂದಾಯ ಸಚಿವ ಆರ್. ಅಶೋಕ್ ವ್ಯಕ್ತಪಡಿಸಿ ಮಿನಿ ವಿಧಾನಸೌಧ ಹೆಸರು ಬದಲಾಯಿಸುವುದಾಗಿ ಹೇಳಿದ್ದರು.

ರಾಜ್ಯದಲ್ಲಿನ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳೊಂಡಂತೆ ಇತರೆ ಸರ್ಕಾರಿ ಕಛೇರಿಗಳು ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ 'ತಾಲೂಕು ಆಡಳಿತ ಸೌಧ' ಎಂದು ಬದಲಿಸುವುದು ಸೂಕ್ತವೆಂದು ಹಾಗೂ ಪುಸ್ತುತ ಇರುವ ಮಿನಿ ಎಂಬ ಪದ ಆಂಗ್ಲ ಭಾಷೆಯಾಗಿದ್ದು, ತಾಲ್ಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ ಕಾಯಿದೆ - ಕಾನೂನುಗಳನ್ನಾಗಲೀ ರೂಪಿಸುವ ಶಕ್ತಿಕೇಂದ್ರಗಳಲ್ಲದ ಕಾರಣ ಮಿನಿ ವಿಧಾನಸೌಧ ' ಎಂಬುದರ ಬದಲಾಗಿ ' ತಾಲ್ಲೂಕು ಆಡಳಿತ ಸೌಧ ' ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರು ಮತ್ತು ಗಣ್ಯ ವ್ಯಕ್ತಿಗಳು ಕೋರಿರುತ್ತಾರೆ. ಪ್ರಸ್ತುತ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ 'ಮಿನಿವಿಧಾನಸೌಧ' ಎಂಬ ನಾಮಾಂಕಿತದ ಬದಲು 'ತಾಲ್ಲೂಕು ಆಡಳಿತ ಸೌಧ' ಎಂದು ನಾಮಾಂಕಿತಗೊಳಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸರ್ಕಾರ ಸೂಚಿಸಿದೆ.

ಮಿನಿ ವಿಧಾನಸೌಧ ಎಂಬ ಹೆಸರಿನಲ್ಲಿ ‘ಮಿನಿ’ ಎಂಬ ಇಂಗ್ಲಿಷ್ ಪದವಿದೆ. ಈ ಕಾರಣದಿಂದ ಹೆಸರಿಗೆ ಸಾಹಿತ್ಯ ವಲಯದಿಂದ ಆಕ್ಷೇಪ ವ್ಯಕ್ತವಾಗಿತ್ತದೆಂದು ಹೆಸರಿನ ಬದಲಾವಣೆ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳುವುದಾಗಿ ಕೆಲವು ದಿನಗಳ ಹಿಂದೆ ಅಶೋಕ್ ಹೇಳಿದ್ದರು. ಅಲ್ಲದೇ ಮಿನಿ ವಿಧಾನಸೌಧಗಳ ಹೆಸರು ಬದಲಾವಣೆ ಪ್ರಸ್ತಾವನೆ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್​​ಗೆ ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ಪತ್ರ ಬರೆದು ಮಿನಿ ವಿಧಾನಸೌಧಗಳಿಗೆ 'ಅಂಬೇಡ್ಕರ್ ತಾಲೂಕು ಆಡಳಿತ ಕಚೇರಿ' ಎಂದು ಹೆಸರಿಡಲು ಮನವಿ ಮಾಡಿ. ಮಿನಿ ವಿಧಾನಸೌಧಗಳಿಗೆ ಮರು ನಾಮಕರಣ ಮಾಡಲು ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com