ಬಿಟ್ ಕಾಯಿನ್ ಹಗರಣ: ಅಪರಾಧ ಸಂಖ್ಯೆಯಲ್ಲಿ ಕಂಡು ಬಂದ ತಪ್ಪು ಮುದ್ರಣ ದೋಷವಾಗಿದೆ- ಬೆಂಗಳೂರು ಪೊಲೀಸರ ಸ್ಪಷ್ಟನೆ

ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ಇಂಟರ್‌ಪೋಲ್‌ನೊಂದಿಗಿನ ಸಂವಹನದಲ್ಲಿ ಕಂಡು ಬಂದ ಅಪರಾಧ ಸಂಖ್ಯೆಯಲ್ಲಿನ ತಪ್ಪು ಮುದ್ರಣ ದೋಷವಾಗಿದೆ ಎಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ಬೆಂಗಳೂರು ನಗರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ಇಂಟರ್‌ಪೋಲ್‌ನೊಂದಿಗಿನ ಸಂವಹನದಲ್ಲಿ ಕಂಡು ಬಂದ ಅಪರಾಧ ಸಂಖ್ಯೆಯಲ್ಲಿನ ತಪ್ಪು ಮುದ್ರಣ ದೋಷವಾಗಿದೆ ಎಂದು ತಿಳಿಸಿದೆ.

ಈ ಮೂಲಕ ಪ್ರಕರಣವೊಂದಕ್ಕೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದಂತಾಗಿದೆ.

ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬೆಂಗಳೂರು ಪೊಲೀಸರು, ಶ್ರೀಕೃಷ್ಣ @ಶ್ರೀಕಿ ಮಾಡಿದ ಹ್ಯಾಕಿಂಗ್ ಬಗ್ಗೆ 2021 ರ ಎಪ್ರಿಲ್ 28 ರಂದು ಇಂಟರ್‌ಪೋಲ್ ಸಂಪರ್ಕ ಅಧಿಕಾರಿ, ಸಿಐಡಿಗೆ ಪತ್ರ ಬರೆಯಲಾಗಿತ್ತು. ಇಂಟರ್‌ಪೋಲ್‌ನೊಂದಿಗಿನ ಹಂಚಿಕೊಂಡಿರುವ ಪತ್ರದಲ್ಲಿ ಮುದ್ರಣ ದೋಷದಿಂದಾಗಿ ಅಪರಾಧಗಳ ಸಂಖ್ಯೆಯಲ್ಲಿ ತಪ್ಪಾಗಿದೆ ಎಂದು ಹೇಳಿದೆ.

ಅಲ್ಲದೆ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ಕಾಟನ್‌ಪೇಟೆ, ಸೈಬರ್ ಕ್ರೈಂ, ಕೆಂಪೇಗೌಡನಗರ, ಅಶೋಕನಗರ ಠಾಣೆಗಳಲ್ಲಿ ಹ್ಯಾಕಿಂಗ್‌ ಕುರಿತು ದಾಖಲಾಗಿರುವ ನಾಲ್ಕು ಪ್ರಕರಣಗಳ ವಿವರಗಳನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ.

ವಿವಿಧ ವೆಬ್‌ಸೈಟ್‌ಗಳು ಮತ್ತು ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳಲ್ಲಿ ಹ್ಯಾಕಿಂಗ್ ಮತ್ತು ರಾನ್ಸಮ್‌ವೇರ್ ದಾಳಿ ಸೇರಿದಂತೆ ಇತರ ಅಪರಾಧಗಳನ್ನು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆಂದು ಪತ್ರದಲ್ಲಿ ತಿಳಿಸಲಾಗಿದೆ.

ಇದರಲ್ಲಿ ಶ್ರೀಕಿ ಹ್ಯಾಕ್ ಮಾಡಿದ್ದಾನೆ ಎನ್ನಲಾದ 12 ವೆಬ್‌ಸೈಟ್‌ಗಳು ಮತ್ತು ಬಿಟ್‌ಕಾಯಿನ್ ಎಕ್ಸ್‌ಚೇಂಜ್‌ಗಳ ಹೆಸರನ್ನೂ ಕೂಡ ಉಲ್ಲೇಖಿಸಿರುವುದು ಕಂಡು ಬಂದಿದೆ.

ನಿನ್ನೆಯಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರು, ಮೊನ್ನೆ ನವೆಂಬರ್ 13ರಂದು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಕಳೆದ ಏಪ್ರಿಲ್ 28ರಂದು ಇಂಟರ್ ಪೋಲ್ ಗೆ ಪತ್ರ ಮುಖೇನ ಮನವಿ ಮಾಡಿ ಕೊಳ್ಳಲಾಗಿದೆ ಎಂದಿದ್ದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಪ್ರಕಟಣೆಯನ್ನು ಉಲ್ಲೇಖಿಸಿ, ಕ್ರೈಂ ನಂ 3/2020 ರ ಪ್ರಕರಣ ಸಂಬಂಧ 28 ಏಪ್ರಿಲ್ 2021 ರಂದು ಬೆಂಗಳೂರು ಪೊಲೀಸ್ ಕಮಿಷನರ್ ಇಂಟರ್ ಪೊಲ್ ಗೆ ಪತ್ರ ಬರೆಯಲಾಗಿದೆ.  ಆದರೆ, ಇದರಲ್ಲಿ ದೂರಿನ ಸಾರಾಂಶ ಉಲ್ಲೇಖಿಸಿಲ್ಲ ಏಕೆ..? ಎಂದು ಪ್ರಶ್ನೆ ಮಾಡಿದ್ದರು.

23 ಸಾವಿರ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಪೊಲೀಸ್ ಕಮಿಷನರ್ ಕಚೇರಿಗೆ ನೆರವು ಬೇಕೇ..?. ಸರ್ಕಾರ ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಮುಚ್ಚು ಮರೆ ಮಾಡುತ್ತಿರುವುದು ಏಕೆ..? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.  

ಆರೋಪಗಳು ಕೇಳಿ ಬಂದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸ್ಪಷ್ಟನೆಗಳನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com