ಬೆಂಗಳೂರು: ಬೆಂಕಿ ಹೊತ್ತಿಕೊಂಡಿದ್ದ ಮನೆಯಲ್ಲಿ ಕಾರು ಸ್ಫೋಟ, ಕಾರ್ಯಾಚರಣೆ ನಡೆಸುತ್ತಿದ್ದ 3 ಅಗ್ನಿಶಾಮಕ ದಳದ ಸಿಬ್ಬಂದಿಗೆ ಗಾಯ

ಬನಶಂಕರಿ ಬಳಿಯ ಇಟ್ಟಮಡುವಿನಲ್ಲಿದ್ದ ಎರಡು ಅಂತಸ್ತಿನ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಮನೆಯ ತಳಮಹಡಿಯಲ್ಲಿ ನಿಲ್ಲಿಸಲಾಗಿದ್ದ ಕಾರು ಸ್ಫೋಟಗೊಂಡು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬನಶಂಕರಿ ಬಳಿಯ ಇಟ್ಟಮಡುವಿನಲ್ಲಿದ್ದ ಎರಡು ಅಂತಸ್ತಿನ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಮನೆಯ ತಳಮಹಡಿಯಲ್ಲಿ ನಿಲ್ಲಿಸಲಾಗಿದ್ದ ಕಾರು ಸ್ಫೋಟಗೊಂಡು ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಮನೆ ಮಾಲೀಕ ಕಿಶೋರ್, ಅವರ ಪತ್ನಿ ಹಾಗೂ ಸಂಬಂಧಿಕರು ಮಲಗಿದ್ದು, ನೆರೆಮನೆಯವರು ಕೂಗಾಟದಿಂದ ಎದ್ದಿದ್ದಾರೆ. ಬಳಿಕ ಕಿಟಕಿಯಲ್ಲಿ ನೋಡಿದಾಗ ಮನೆಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಮೆಟ್ಟಿಲಿಳಿದು ಕೆಳಮಹಡಿಗೆ ಬರಲು ಅವರಿಗೆ ಸಾಧ್ಯವಾಗಿಲ್ಲ. ಕೊನೆಗೆ ಮಹಡಿಯ ಗೇಟ್ ಬೀಗ ಮುರಿದ ಕಿಶೋರ್, ಬಳಿಕ ಪಕ್ಕದ ಮನೆಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಬಂದು ಜೀವ ಉಳಿಸಿಕೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದರು. ಬೆಂಕಿಯು ತೀವ್ರವಾಗಿದ್ದರಿಂದ ಸ್ಥಳದಲ್ಲಿದ್ದ ಕಾರು ಸ್ಫೋಟಗೊಂಡಿದೆ. ಈ ವೇಳೆ ಕಾರ್ಯಾಚರಣೆ ನಡುಸುತ್ತಿದ್ದ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡ ಸಿಬ್ಬಂದಿಗಳನ್ನು ಹರೀಶ್, ರಾಜಶೇಖರ್, ಮುತ್ತಪ್ಪ ಎಂದು ಗುರ್ತಿಸಲಾಗಿದ್ದು, ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಳಿಕ ಸ್ಥಳಕ್ಕೆ ಮತ್ತೊಂದು ಅಗ್ನಿಶಾಮಕ ದಳದ ಸಿಬ್ಬಂದಿಗಳ ದಳ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು, ಘಟನೆಯಲ್ಲಿ ಮನೆಯ ನೆಲಮಹಡಿ ಹಾಗೂ ಎರಡು ಸ್ಕೂಟರ್, ಕಾರು ಸುಟ್ಟು ಭಸ್ಮವಾಗಿದೆ.

ಈ ನಡುವೆ ಸ್ಥಳಕ್ಕೆ ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸಿಕೆ ಅಚ್ಚುಕಟ್ಟು ಪೊಲೀಸರು, ನೆಲಮಹಡಿಯಲ್ಲಿದ್ದ ಯುಪಿಎಸ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ. ಇನ್ನು ಕಾರಿನ ಸ್ಫೋಟಕ್ಕೆ ಅದರಲ್ಲಿ ಇಂಧನವು ಕಾರಣವಾಗಿದೆ. ಈ ಕುರಿತ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳಗಿನ ಜಾವ 2.30ರ ಸುಮಾರಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯವರು ನೆರೆಹೊರೆಯವರ ಸಹಾಯದಿಂದ ಟೆರೇಸ್ ನಿಂದ ಪಕ್ಕದ ಮನೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಾಬಾದಲ್ಲಿ ಹೊತ್ತಿಉರಿದ ಬೆಂಕಿ
ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯ ಗಗನ್ ಡಾಬಾದಲ್ಲಿಯೂ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ಗುರುವಾರ ಬೆಳಗಿನ ಜಾವ ಡಾಬಾದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಡಾಬಾವನ್ನ ಅವರಿಸಿದೆ. ಎಡೆಬಿಡದೆ ಮಳೆ ಸುರಿಯುತ್ತಿದ್ದರೂ, ಬೆಂಕಿ ಹತೋಟಿಗೆ ಬಂದಿಲ್ಲ. ಡಾಬಾದ ಒಳಗೆ ಮರದ ವಸ್ತುಗಳಿಂದ ಅಲಂಕಾರ ಮಾಡಲಾಗಿದ್ದು, ಇದರಿಂದ ಬೆಂಕಿಯ ಪ್ರಮಾಣ ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.

ಘಟನೆ ವೇಳೆ ಯಾರೊಬ್ಬರೂ ಡಾಬಾದಲ್ಲಿ ಇರಲಿಲ್ಲ. ಎರಡು ಅಗ್ನಿಶಾಮಕ ದಳದ ವಾಹನಗಳೊಂದಿಗೆ ಬೆಂಕಿ ನಂದಿಸಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ದೇವನಹಳ್ಳಿಯ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com