ವಿದೇಶದಿಂದ ರಾಜ್ಯಕ್ಕೆ ಬರುವ 5 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಪರೀಕ್ಷೆ ಇಲ್ಲ!

ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವ ಐದು ವರ್ಷದೊಳಗಿನ ಮಕ್ಕಳಿಗೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗುವಲ್ಲಿ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಆಗಮಿಸುವ ಐದು ವರ್ಷದೊಳಗಿನ ಮಕ್ಕಳಿಗೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗುವಲ್ಲಿ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ.

ಹಲವು ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ವಿಮಾನ ನಿಲ್ದಾಣ ಹಾಗೂ ಬಂದರು ಮೂಲಕ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಶನಿವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಪರಿಷ್ಕೃತ ಮಾರ್ಗಸೂಚಿಯು ನವೆಂಬರ್ 12 ರಿಂದ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ವಿದೇಶದಿಂದ ರಾಜ್ಯಕ್ಕೆ ಬರುವ “ಐದು ವರ್ಷದೊಳಗಿನ ಮಕ್ಕಳಿಗೆ ಆಗಮನದ ಪೂರ್ವ ಮತ್ತು ನಂತರದ ಕೋವಿಡ್ ಪರೀಕ್ಷೆಯಲ್ಲಿ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಆಗಮನದ ಸಮಯದಲ್ಲಿ ಅಥವಾ ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಕೋವಿಡ್ -19 ರೋಗಲಕ್ಷಣಗಳು ಕಂಡುಬಂದಿದ್ದೇ ಆದರೆ, ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಮತ್ತು ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತದ ಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ದೇಶಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಎ-ಕೆಟಗರಿಯಲ್ಲಿದ್ದ ಇಂತಹ ದೇಶಗಳ ಪಟ್ಟಿಯನ್ನು 11 ರಿಂದ 99ಕ್ಕೆ ಏರಿಕೆ ಮಾಡಲಾಗಿದೆ. ಸಿಂಗಾಪೂರ್‌ ಹಾಗೂ ಜಿಂಬಾಂಬ್ವೆ ದೇಶಗಳನ್ನು ಹೈ-ರಿಸ್ಕ್‌ ಪಟ್ಟಿಯಿಂದ ತೆಗೆದು ಎ-ಕೆಟಗರಿಗೆ ಸೇರಿಸಲಾಗಿದೆ.

ಎ-ಕೆಟಗರಿಯಲ್ಲಿರುವ 99 ದೇಶಗಳಿಂದ ಬರುವವರಿಗೆ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿರುವ ರಾಜ್ಯ ಸರ್ಕಾರ, ಹೆಚ್ಚು ಅಪಾಯಕಾರಿ ಎಂದು ಗುರುತಿಸಿರುವ ಯೂರೋಪ್‌ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೊಟ್ಸಾವನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌ ದೇಶಗಳಿಂದ ಬರುವವರು ಆಗಮಿಸುವ ಮೊದಲೂ 72 ಗಂಟೆಗಳಿಗಿಂತ ಹಳೆಯ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಬೇಕು. ಜೊತೆಗೆ ರಾಜ್ಯಕ್ಕೆ ಆಗಮಿಸಿದ ಬಳಿಕವೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್‌ ಬಂದರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಬೇಕು. 8ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು ಎಂದು ತಿಳಿಸಿದೆ.

ಇಸ್ರೇಲ್‌, ಆಸ್ಪ್ರೇಲಿಯಾ, ಫ್ರಾನ್ಸ್‌, ಈಜಿಪ್ಟ್‌ ಸೇರಿದಂತೆ 99 ದೇಶಗಳಿಂದ ಬರುವವರು ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿರುವ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಇವರು 72 ಗಂಟೆ ಹಳೆಯದಲ್ಲದ ನೆಗೆಟಿವ್‌ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.

ಉಳಿದಂತೆ ಲಸಿಕೆ ಪಡೆಯದ ಹಾಗೂ ಒಂದು ಡೋಸ್‌ ಮಾತ್ರ ಪಡೆದಿರುವವರು ಏರ್‌ಪೋರ್ಟ್‌ಗೆ ಬಂದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಬಳಿಕ ಬಳಿಕ 7 ದಿನ ಹೋಂ ಕ್ವಾರಂಟೈನ್‌ಲ್ಲಿದ್ದು ಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು. ಈ ವೇಳೆ ನೆಗೆಟಿವ್‌ ಬಂದರೂ ಮತ್ತೆ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಲಾಗಿದೆ.

ದೇಶಕ್ಕೆ ಆಗಮಿಸುವ ಎಲ್ಲ ದೇಶಗಳ ಪ್ರಯಾಣಿಕರು ‘ಏರ್‌ ಸುವಿಧ’ ಪೋರ್ಟಲ್‌ನಲ್ಲಿ 72 ಗಂಟೆಗಿಂತ ಹಳೆಯದಲ್ಲದ ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಬೇಕು. ಜೊತೆಗೆ ನೆಲದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳುವುದಾಗಿ ಸ್ವಯಂ ಘೋಷಣಾ ಪತ್ರ ಅಪ್‌ಲೋಡ್‌ ಮಾಡಬೇಕು. ರಾಜ್ಯಕ್ಕೆ ಆಗಮಿಸುವ ವೇಳೆ ಥರ್ಮಲ್‌ ಸ್ಕ್ರೀನಿಂಗ್‌ನಲ್ಲಿ ರೋಗ ಲಕ್ಷಣಗಳು ಪತ್ತೆಯಾದರೆ ಯಾವ ದೇಶದಿಂದ ಬಂದಿದ್ದರೂ ಪರೀಕ್ಷೆ ಮಾಡಿ ಕ್ವಾರಂಟೈನ್‌ ವಿಧಿಸಲಾಗುವುದು. ರೋಗ ಲಕ್ಷಣ ಇಲ್ಲದಿದ್ದರೆ ಸ್ವಯಂ ನಿಗಾದಲ್ಲಿರಲು ಸೂಚಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದ್ದು, ಆಗಮನದ ಪೂರ್ವ ಮತ್ತು ನಂತರದ ಕೋವಿಡ್ ಪರೀಕ್ಷೆಯಲ್ಲಿ ವಿನಾಯಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com