'ಸಂವೇದನ ರಹಿತ ಜನ.. ಅಪಘಾತವಾದಾಗ ನೆರವಾಗಿ': ಕಾರು ಅಪಘಾತ ಕುರಿತು ಸಂಸದ ಪ್ರತಾಪ್ ಸಿಂಹ ಅಸಮಾಧಾನ

ತಮ್ಮ ಕಾರು ಅಪಘಾತವಾಗಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ಅಪಘಾತವಾದಾಗ ನೆರವಾಗಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ತಮ್ಮ ಕಾರು ಅಪಘಾತವಾಗಿದೆ ಎಂಬ ಸುದ್ದಿಗಳಿಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ಅಪಘಾತವಾದಾಗ ನೆರವಾಗಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ಇಂದು ಬೆಳಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಕಾರು ರಾಮನಗರ ಬಳಿ ಅಪಘಾತಕ್ಕೀಡಾಗಿದೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು. ಈ ಸುದ್ದಿಗೆ ಸಂಬಂಧಿಸಿದಂತೆ ಇದೀಗ ಸ್ವತಃ ಪ್ರತಾಪ್ ಸಿಂಹ ಅವರು ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ, 'ನನ್ನ ಕಾರು ಅಪಘಾತಗೊಂಡಿಲ್ಲ. ಅಪಘಾತಗೊಂಡ ಕಾರಿನಲ್ಲಿದ್ದಂತ ಕುಟುಂಬವನ್ನು ರಕ್ಷಿಸಿದೆವು. ಆ ಸ್ಥಳದಲ್ಲಿ ನನ್ನ ಕಂಡಂತ ಅನೇಕರು ಹೀಗೆ ತಪ್ಪಾಗಿ ಅಂದುಕೊಂಡು ಸುದ್ದಿಯಾಗಿದೆ. ಟಿವಿಗಳಲ್ಲಿ ನನ್ನ ಕಾರು ಅಪಘಾತ ಉಂಟಾಗಿದೆ ಎಂಬುದಾಗಿ ನೋಡಿದಂತ ಅನೇಕ ಸ್ನೇಹಿತರು, ಅಭಿಮಾನಿಗಳು ಕರೆ ಮಾಡ್ತಾ ಇದ್ದಾರೆ. ಆದರೆ ವಸ್ತು ಸ್ಥಿತಿ ಏನು ಅಂದರೆ, ನಾನು ಬೆಂಗಳೂರಿನಿಂದ ಬರ್ತಾ ಇದ್ದೆ. ಮದ್ದೂರಿನ ಹತ್ತಿರ ವೈಶಾಲಿ ಹೋಟೆಲ್ ಬಳಿ ಊಟಕ್ಕೆಂದು ನಿಲ್ಲಿಸಿದ್ದೆವು. ಜಗಲಿಯಂತಿದ್ದ ಕಟ್ಟೆಯ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ಮೈಸೂರಿನ ಕಡೆಯಿಂದ ಬರ್ತಾ ಇದ್ದಂತ ಇನ್ನೋವಾದ ಮುಂದಿನ ಟೈರ್ ಪಂಕ್ಚರ್ ಆದ ಕಾರಣ, ಪಲ್ಟಿಯಾಗಿತ್ತು. ಆಗ ಯಾರೂ ಸಹಾಯ ಮಾಡದೇ, ವಾಹನಗಳು ಅವರನ್ನು ನೋಡಿಕೊಂಡು ತೆರಳುತ್ತಾ ಇದ್ದದ್ದನ್ನು ಗಮನಿಸಿದೆ'.

ಆಗ ನಮ್ಮ ಗನ್ ಮ್ಯಾನ್ ಹಾಗೂ ಡೈವರ್ ಜೊತೆಗೆ ನಾನು ಓಡಿ ಹೋಗಿ, ಕಾರಿನ ಗ್ಲಾಸ್ ಹೊಡೆದು ಅದರಲ್ಲಿದ್ದ ಗಂಡ-ಹೆಂಡತಿ ಹಾಗೂ ಅವರ ಮಗಳು ಮತ್ತು ಡ್ರೈವರ್ ರನ್ನು ಹೊರಗೆ ಎಳೆದೆವು. ಭಯದಲ್ಲಿದ್ದಂತ ಅವರಿಗೆ ಧೈರ್ಯ ತುಂಬಿ, ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ, ಅವರನ್ನು ಕರೆಸಿ, ಮಹಜರು ಮಾಡಿಸಿದೆ. ಆನಂತರ ಚೆನ್ನಪಟ್ಟಣದಿಂದ ಮತ್ತೊಂದು ಕಾರು ಕರೆಸಿ, ಅವರನ್ನು ಮತ್ತೆ ಬೆಂಗಳೂರಿಗೆ ಕಳುಹಿಸಿಕೊಟ್ಟೆ. ಈ ಸಂದರ್ಭದಲ್ಲಿ ಕಾರು ಪಲ್ಟಿಯಾಗಿದ್ದಂತ ಸ್ಥಳದಲ್ಲಿ ನಾನು ಇದ್ದದ್ದನ್ನು ಕಂಡ ಅನೇಕರು ನನ್ನ ಕಾರು ಪಲ್ಟಿ ಆಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ'. 

ಆದರೆ ಈ ಘಟನೆಯಲ್ಲಿ ನಾನು ಕಂಡದ್ದು ಏನು ಎಂದರೆ ಅಪಘಾತವಾದಾಗ ಅದೇ ರಸ್ತೆಯಲ್ಲಿ ಹತ್ತಾರು ವಾಹನಗಳು ಅಪಘಾತ ನೋಡಿಯೂ ಯಾರೂ ನೆರವಿಗೆ ಬಾರದೇ ತಮ್ಮಷ್ಟಕ್ಕೆ ತಾವು ಹೋಗುತ್ತಿದ್ದರು. ದಯವಿಟ್ಟು ಜನರು ಹೀಗೆ ಅಪಘಾತ ಉಂಟಾಗದ ನೆರವಾಗೋದಕ್ಕೆ ತೊಡಗಿ. ಅದನ್ನು ಬಿಟ್ಟು ಸುಮ್ಮನೇ ನೋಡಿಕೊಂಡು ಹೋಗಬೇಡಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com