ಬೆಂಗಳೂರು: ನೀರು ನುಗ್ಗಿದ ಮನೆಗಳಿಗೆ 10 ಸಾವಿರ, ಸಂಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ರೂ., ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳಿಗೆ 1 ಲಕ್ಷ ರೂ.ಗಳ....
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ರೂ., ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳಿಗೆ 1 ಲಕ್ಷ ರೂ.ಗಳ ತುರ್ತು ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ ಜಲಾವೃತವಾಗಿರುವ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನೀರು ನುಗ್ಗಿರುವ ಮನೆಗಳಿಗೆ 10 ಸಾವಿರ ರೂ.ಗಳನ್ನು ಇಂದೇ ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದರು.

ಯಲಹಂಕ ಪ್ರದೇಶದಲ್ಲಿ 400 ಮನೆಗಳಿಗೆ ಹಾನಿಯಾಗಿದೆ. 10 ಕಿ.ಮೀ ಮುಖ್ಯರಸ್ತೆ , 20 ಕಿ.ಮೀ ಇತರೆ ರಸ್ತೆಗಳು ಹಾನಿಯಾಗಿದೆ. ಮೂಲಭೂತ ಸೌಕರ್ಯಗಳ ದುರಸ್ತಿಗೆ ಅಗತ್ಯವಿರುವ ಅನುದಾನದ ಅಂದಾಜು ಮಾಡಲು ಸೂಚನೆ ನೀಡಿದ್ದು, ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. 

ಬೆಂಗಳೂರಿನಲ್ಲಿ ರಾಜಕಾಲುವೆಗಳ ಸಮಸ್ಯೆ ಇದ್ದು, 50.ಕಿ.ಮೀ ರಾಜಕಾಲುವೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಇನ್ನೂ 50 ಕಿ.ಮೀಗೆ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಮತ್ತೊಮ್ಮೆ ಸಭೆ ಕರೆದು ಎಲ್ಲೆಲ್ಲಿ ರಾಜಕಾಲುವೆ ಸಣ್ಣದಿದ್ದು, ಅಡಚಣೆ ಇದೆ ಅಲ್ಲಿ ಶಾಶ್ವತ ಪರಿಹಾರ ಕೈಗೊಳ್ಳಲು ತೀರ್ಮಾನಿಸಿ, ಅಗತ್ಯ ಅನುದಾನದ ವ್ಯವಸ್ಥೆ ಮಾಡಲಾಗುವುದು ಎಂದರು.

ಆದ್ದರಿಂದ ಮಳೆ ನಿಂತ ಕೂಡಲೇ ಬಿಬಿಎಂಪಿ ವತಿಯಿಂದ ರಾಜಕಾಲುವೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಡಚಣೆ ಇರುವಲ್ಲಿ ಆ ಸ್ಥಳದ ಮಾಲೀಕರ ಬಳಿ ಮಾತನಾಡಿ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಎಂಟು ಅಡಿಯಿರುವ ರಾಜಕಾಲುವೆಯನ್ನು 30 ಅಡಿಗಳಿಗೆ ಹೆಚ್ಚಿಸಬೇಕು. ಮತ್ತು 2 ರಾಜಕಾಲುವೆಗಳಿಗೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿರುವುದರಿಂದ ಯಲಹಂಕ ಕೆರೆ ಕಟ್ಟೆ ಒಡೆದು ತಗ್ಗು ಪ್ರದೇಶಗ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಅದರಲ್ಲಿಯೂ ಕೇಂದ್ರೀಯ ವಿಹಾರ ಸಮುಚ್ಚಯದಲ್ಲಿ 603 ಜನ ವಾಸವಿದ್ದು, ಇಲ್ಲಿ 4-5 ಅಡಿ ನೀರು ನಿಂತು ತುಂಬಿ ಜನರು ಓಡಾಡಲು ಕಷ್ಟವಾಗಿದೆ. ಯಲಹಂಕ ಶಾಸಕ ವಿಶ್ವನಾಥ್ ಅವರು ಕೂಡಲೇ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡಿದ್ದಾರೆ. ಜನರ ಓಡಾಟಕ್ಕೆ ಸಹಾಯ ಹಾಗೂ ಆಹಾರ ಮತ್ತು ನೀರು ಪೂರೈಸಿದ್ದಾರೆ ಎಂದರು.

ಯಲಹಂಕ ಪ್ರದೇಶದಲ್ಲಿ ಉಂಟಾಗಿರುವ ಹಾನಿಗೆ ವ್ಯವಸ್ಥಿತ ಪರಿಹಾರ ನೀಡಬೇಕೆಂದು ವಿಶ್ವನಾಥ್ ಅವರೊಂದಿಗೆ ನಿನ್ನೆ ಚರ್ಚಿಸಿದ್ದು, ಇಂದು ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಲು ಆಗಮಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಒಳಚರಂಡಿ ವ್ಯವಸ್ಥೆ:
603 ಜನರಿರುವ ಕೇಂದ್ರೀಯ ವಿಹಾರ್ ಸಮುಚ್ಚಯದಲ್ಲಿ ನೀರು ಹೊರಹಾಕಲು ಅಗತ್ಯವಿರುವ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಒಳಚರಂಡಿ ಹೋಗುವುದರಿಂದ ಅವರ ಒಪ್ಪಿಗೆ ಪಡೆಯಲಾಗುವುದು. ಆಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಸಮಸ್ಯೆಯ ಮೂಲ:
ಯಲಹಂಕ ಮೇಲ್ಭಾಗದಲ್ಲಿರುವ ಸುಮಾರು 11 ಕೆರೆಗೆಳು ಯಲಹಂಕ ಕೆರೆಗೆ ಸೇರುತ್ತವೆ. ಈ ಬಾರಿ ದಕ್ಷಿಣ ಉತ್ತರ ಒಳನಾಡು, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಹೆಚ್ವಿನ ಮಳೆಯಾಗಿದೆ. ಇಲ್ಲಿಯೂ ಅತಿವೃಷ್ಟಿಯಾಗಿ, ಯಲಹಂಕ ಕೆರೆಯಿಂದ ಹೆಚ್ವಿನ ಪ್ರಮಾಣದಲ್ಲಿ ನೀರು ಹರಿದಿದೆ. ಯಲಹಂಕ ಕೆರೆಗೆ ಎರಡು ಕೋಡಿಗಳಿವೆ. ಇವೆರಡು ತುಂಬಿ ಹರಿದಿದೆ ಹಾಗೂ ಎರಡು ರಾಜಕಾಲುವೆಗಳ ಗಾತ್ರವೂ ಬಹಳ ಕಡಿಮೆಯಿದೆ. ಯಲಹಂಕ ಕೆರೆ ದೊಡ್ಡದಿದ್ದು, ಅದರ ಹೊರಹರಿವಿನ ಪ್ರಮಾಣವೂ ಹೆಚ್ಚಿದೆ. ರಾಜಕಾಲುವೆಗಳು ಅತಿಕ್ರಮಣವಾಗಿದೆ ಇಲ್ಲವೇ ಮುಚ್ಚಿಹೋಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com