ದುಬೈ ಎಕ್ಸ್ ಪೋ 2020: ಕನ್ನಡದ ಕಂಪು ಪಸರಿಸಲಿರುವ ಮಂಜು ಡ್ರಮ್ಸ್!
ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಹೆಮ್ಮೆ ಮಂಜು ಡ್ರಮ್ಸ್ ಅವರು ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿದ್ದಾರೆ. ಈಗಾಗಲೇ ಆರಂಭವಾಗಿರುವ ದುಬೈ ಎಕ್ಸ್ ಪೋ 2020ರಲ್ಲಿ ಮಂಜು ಅವರು ಭಾಗವಹಿಸಿ ಸತತ ಆರು ತಿಂಗಳ ಕಾಲ ಭಾರತದ ಹಾಗೂ ಜಗತ್ತಿನ ಇತರೆ ತಾಳವಾದ್ಯಗಳನ್ನು ನುಡಿಸಲಿದ್ದಾರೆ.
Published: 23rd November 2021 06:45 PM | Last Updated: 23rd November 2021 08:11 PM | A+A A-

ಮಂಜು ಡ್ರಮ್ಸ್
ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಹೆಮ್ಮೆ ಮಂಜು ಡ್ರಮ್ಸ್ ಅವರು ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿದ್ದಾರೆ. ಈಗಾಗಲೇ ಆರಂಭವಾಗಿರುವ ದುಬೈ ಎಕ್ಸ್ ಪೋ 2020ರಲ್ಲಿ ಮಂಜು ಅವರು ಭಾಗವಹಿಸಿ ಸತತ ಆರು ತಿಂಗಳ ಕಾಲ ಭಾರತದ ಹಾಗೂ ಜಗತ್ತಿನ ಇತರೆ ತಾಳವಾದ್ಯಗಳನ್ನು ನುಡಿಸಲಿದ್ದಾರೆ. 40ಕ್ಕೂ ಹೆಚ್ಚು ಕಲಾವಿದರು ತಮ್ಮ ತಮ್ಮ ದೇಶದ ಸಂಸ್ಕೃತಿಯನ್ನು ಅನಾವರಣಗೊಳಿಸುವ ಸಂಗೀತ ವಾದ್ಯಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಾರೆ. ಇದರಲ್ಲಿ ಮಂಜು ಅವರು ಕೊನ್ನಕೋಲ್, ಮೋರ್ಚಿಂಗ್, ಖಂಜೀರಾ, ಘಟಂ, ನಕಾರ ಹಾಗೂ ಪಾಶ್ಚಿಮಾತ್ಯ ವಾದ್ಯವಾದ ಡ್ರಮ್‍ಸೆಟ್ ಅನ್ನು ನುಡಿಸಲಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಎರಡನ್ನೂ ಪಾಶ್ಚಾತ್ಯ ವಾದ್ಯವಾದ ಡ್ರಂಸೆಟ್ ನಲ್ಲಿ ನುಡಿಸುವ ದೇಶದ ಕೆಲವೇ ಕಲಾವಿದರಲ್ಲಿ ಮಂಜು ಅವರು ಕೂಡ ಹೌದು ಎನ್ನುವುದು ನಮ್ಮ ಹೆಮ್ಮೆ.
2020ರಲ್ಲಿ ನಡೆಯಬೇಕಿದ್ದ ವಿಶ್ವದ ವಿಭಿನ್ನ ಸಂಸ್ಕೃತಿ ಮಹಾಮೇಳ ದುಬೈ ಎಕ್ಸ್ ಪೊ ಕೊರೊನಾದಿಂದಾಗಿ 2021ರಲ್ಲಿ ನಡೆಯುತ್ತಿದೆ.
ಮಂಜುನಾಥ್ ಎನ್.ಎಸ್ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಶಾಲಾ ದಿನಗಳಲ್ಲಿ ಮಾರ್ಚ್‍ಫಾಸ್ಟ್ ಬ್ಯಾಂಡ್‍ನಲ್ಲಿ ಸೈಡ್ ಡ್ರಮ್ಸ್ ನುಡಿಸುತ್ತಿದ್ದ ಮಂಜುನಾಥ್ , ತಮ್ಮ 14ನೇ ವಯಸ್ಸಿನಲ್ಲಿಯೇ ವೇದಿಕೆ ಕಾರ್ಯಕ್ರಮವೊಂದರಲ್ಲಿ ಗುರುಗಳಾದ ಸುಕುಮಾರ್ ಅವರಿಂದ ಕಲಿತ ಪರ್ಕುಶನ್ಸ್ ನುಡಿಸಿ ಭೇಷ್ ಎನಿಸಿಕೊಂಡರು.
ಆಕಾಶವಾಣಿಯಲ್ಲಿ ಗ್ರೇಡೆಡ್ ಕಲಾವಿದರ ಸ್ಥಾನ ಪಡೆದುಕೊಂಡ ಮಂಜುನಾಥ್ ಅವರು, ಅಲ್ಲಿ "ಮೋರ್ಚಿಂಗ್" ವಾದನದಲ್ಲಿ ಹೆಸರು ಮಾಡಿದರು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸಂಪ್ರದಾಯಗಳನ್ನು ಪುಣೆಯ ತಬಲ ವಾದಕ ತಾಲ್ ಯೋಗಿ ಸುರೇಶ್ ತಲ್ವಕರ್ ಅವರ ಬಳಿ ಅಭ್ಯಾಸ ಮಾಡಿದರು. ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಹಂಸಲೇಖ, ಗುರುಕಿರಣ್, ಅರ್ಜುನ್ ಜನ್ಯಾ, ಎಸ್.ಪಿ.ಬಿ, ಹರಿಹರನ್, ಸೋನುನಿಗಂ ವಿಜಯ್ ಪ್ರಕಾಶ್, ರಘುದೀಕ್ಷಿತ್ ಸೇರಿದಂತೆ ಅನೇಕ ದಿಗ್ಗಜರ ಜೊತೆ ಅವರು ಕೆಲಸ ಮಾಡಿದ್ದಾರೆ.
ಮಾಣಿಕ್ಯ ಚಿತ್ರದ "ಜೀವಾ, ಜೀವಾ" ಹಾಡು ಇವರಿಗೆ ಹಿಟ್ ತಂದುಕೊಟ್ಟಿತು. ಕನ್ನಡ ಕೋಗಿಲೆ, ಹಾಡು ಕರ್ನಾಟಕ, ಸ್ಟಾರ್ ಸಿಂಗರ್, ಸರಿಗಮಪ ದಂತಹ ರಿಯಾಲಿಟಿ ಶೋಗಳಲ್ಲೂ ಮಂಜು ಡ್ರಮ್ಸ್ ಅವರು ಕೆಲಸ ಮಾಡಿದ್ದಾರೆ. ಲೈವ್ ಕಾನ್ಸರ್ಟ್ ಹಾಗೂ ರೆಕಾರ್ಡಿಂಗ್ ಫೀಲ್ಡ್ ಎರಡೂ ಕಡೆ ಅತ್ಯಂತ ಕ್ರಿಯಾಶೀಲರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಕೋಟಿಗೊಬ್ಬ 3, ಬಜರಂಗಿ 2 ಹಾಗೂ ಇತರೆ ಸಿನಿಮಾಳಲ್ಲೂ ಇವರ ಕೈಚಳಕ ಕೇಳಲು ಸಿಕ್ಕಿದೆ. ಜಗತ್ತಿನ ಪ್ರಖ್ಯಾತ ವೇದಿಕೆಗಳಾದ ಲಂಡನ್ ನ ಸೌತ್ ಬ್ಯಾಂಕ್ ಸೆಂಟರ್ , ಜಾಸ್ ಫೆಸ್ಟಿವಲ್, ಮೈಸೂರು ದಸರಾ, ಹಂಪಿ ಉತ್ಸವ, ಅಮೆರಿಕದ ಅಕ್ಕ ಸಮ್ಮೇಳನ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಡ್ರಮ್ ನುಡಿಸಿದ್ದಾರೆ.
ಭವಿಷ್ಯದ ಕನಸುಗಳು: ಈಗಾಗಲೇ ಪ್ರಖ್ಯಾತಿ ಹೊಂದಿರುವ "ಮಂಜು ಡ್ರಮ್ಸ್ ಕಲೆಕ್ಟಿವ್" ಬ್ಯಾಂಡ್ ಅನ್ನು ಇನ್ನಷ್ಟು ಕ್ರಿಯಾಶೀಲಗೊಳಿಸುವುದು. ಸದ್ಯದಲ್ಲೇ ಅವರ ಎರಡು ಆಲ್ಬಂಗಳು ಕೂಡ ಬಿಡುಗಡೆಗೊಳ್ಳಲಿವೆ.