ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ಹೈಕೋರ್ಟ್ ಸಮ್ಮತಿ

ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅನುಮತಿಸಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅನುಮತಿಸಿದೆ. 

ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ. 

ಪ್ರಾಣಿ ಸಂಗ್ರಹಾಲಯದ ಸ್ಥಳಾಂತರಕ್ಕೆ ಅಗತ್ಯವಾದ ನಿರ್ಮಾಣ ಚಟುವಟಿಕೆಗಳನ್ನು ಮಾತ್ರ ಮಾಡಬಹುದಾಗಿದೆ. ಯಾವುದೇ ಕಾರಣಕ್ಕೂ ಮನರಂಜನಾ ಚಟುವಟಿಕೆಗಳನ್ನು ನಡೆಸಲು ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಎಂದು ಸರ್ಕಾರಕ್ಕೆ ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಅಗತ್ಯ ಅನುಮತಿಯನ್ನು ಪಡೆಯಲಾಗಿದೆ ಎಂದು ರಾಜ್ಯ ಸರ್ಕಾರವು ಪೀಠದ ಮುಂದೆ ಮೆಮೊ ಸಲ್ಲಿಸಿತ್ತು.

ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿದ್ದು, ಫೆಬ್ರವರಿ 17ರಂದು ಅರಣ್ಯ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಇಲ್ಲಿ ಅರಣ್ಯ ಇಲಾಖೆ/ರಾಜ್ಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರವು ಅರಣ್ಯ ಪ್ರದೇಶದಲ್ಲಿ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಇದಕ್ಕೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ” ಎಂದು ಮೆಮೊದಲ್ಲಿ ತಿಳಿಸಲಾಗಿದೆ.

ಹೊಸಪೇಟೆ ತಾಲ್ಲೂಕಿನಲ್ಲಿ 20 ಸಾವಿರ ಚದರ ಮೀಟರ್ಗೂ ಕಡಿಮೆ ಪ್ರದೇಶದಲಿ ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯ ನಿರ್ಮಿಸಲಾಗುತ್ತಿದೆ. ಪರಿಸರ ಸಂರಕ್ಷಣಾ ಕಾಯಿದೆ 1986ರ ಅಧಿನಿಯಮಗಳ ಅಡಿ ಇದಕ್ಕಾಗಿ ಪರಿಸರ ಒಪ್ಪಿಗೆ ಪತ್ರದ ಅಗತ್ಯವಿಲ್ಲ. ಬಳ್ಳಾರಿಯಿಂದ ಹೊಸಪೇಟೆಗೆ ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸಲಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ವನ್ಯ ಪ್ರಾಣಿಗಳ ಸಂರಕ್ಷಣಾ ಕೇಂದ್ರವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಲಾಗಿದೆ.

ಅರ್ಜಿದಾರರ ಪರ ವಕೀಲರು “ಪ್ರಾಣಿ ಸಂಗ್ರಹಾಲಯವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ” ಎಂದರು.

ಇದಕ್ಕೆ ನ್ಯಾಯಾಲಯವು ರಾಜ್ಯ ಸರ್ಕಾರವು ಈ ಸಂಬಂಧ ಅಗತ್ಯ ಅನುಮತಿ ಪಡೆದಿದೆ. ಇಲ್ಲಿ ಕಾಯಿದೆ, ನಿಯಮಗಳ ಉಲ್ಲಂಘನೆ ಕಾಣುತ್ತಿಲ್ಲ” ಎಂದು ಹೇಳಿದ್ದು, ಪ್ರಾಣಿ ಧಾಮವನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಸಂಬಂಧಪಟ್ಟವರಿಂದ ಎಲ್ಲಾ ರೀತಿಯ ಅನಮತಿ ಪಡೆಯುವುದು ಅತ್ಯಗತ್ಯ ಎಂದು ಹೇಳಿ ಅರ್ಜಿ ವಿಲೇವಾರಿ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com