ಕಾನೂನು ಪದವಿಯ ಸೆಮಿಸ್ಟರ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ನಿಗದಿಪಡಿಸಿದ್ದ ಐದು ಮತ್ತು ಮೂರು ವರ್ಷದ ಕಾನೂನು ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
Published: 25th November 2021 08:41 AM | Last Updated: 25th November 2021 09:00 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ನಿಗದಿಪಡಿಸಿದ್ದ ಐದು ಮತ್ತು ಮೂರು ವರ್ಷದ ಕಾನೂನು ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಪರೀಕ್ಷೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಎಸ್ಎಲ್ಯು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯವು ಪರೀಕ್ಷೆ ನಡೆಸಬಹುದು. ಆದರೆ, ಪರೀಕ್ಷಾ ಫಲಿತಾಂಶವು ಅರ್ಜಿ ಕುರಿತು ನ್ಯಾಯಾಲಯ ನೀಡುವ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ಆದೇಶದಲ್ಲಿ ಪೀಠ ಸ್ಪಷ್ಟಪಡಿಸಿದೆ.
ಯುಜಿಸಿ ನಿರ್ದೇಶನದ ಅನುಸಾರ ಕೋವಿಡ್ ಸಂದರ್ಭದಲ್ಲಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗಳಿಗೆ ಬಡ್ತಿ ನೀಡಬೇಕಿತ್ತು. ಆದರೆ, ವಿವಿ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಕ್ರಮ ಸರಿಯಲ್ಲ ಎಂದು ನವೀನ್ ಕುಮಾರ್ ಸೇರಿದಂತೆ 10 ವಿದ್ಯಾರ್ಥಿಗಳು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಇದೇ ನವೆಂಬರ್ 15ರಿಂದ ನಡೆಯಬೇಕಿದ್ದ ವಿವಿಯ ಪರೀಕ್ಷಾ ವೇಳಾ ಪಟ್ಟಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು.