ವಾರದೊಳಗೆ ಮಕ್ಕಳಿಗೆ ಟಿಸಿ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ: ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ಕೋವಿಡ್ ಹಾಗೂ ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಸರ್ಕಾರಿ, ಅನುದಾನಿಕ ಶಾಲೆಗಳಿಗೆ ಸೇರಿಸಿರುವ ಮಕ್ಕಳ ಪೋಷಕರಿಗೆ ಶೈಕ್ಷಣಿಕ ಶುಲ್ಕ ಬಾಕಿ ಕಾರಣಕ್ಕಾಗಿ ವರ್ಗಾವಣೆ ಪ್ರಮಾಣ್ ಪತ್ರ (ಟಿಸಿ) ನೀಡದೆ ಸತಾಯಿಸುತ್ತಿರುವ ಅನುದಾನರಹಿತ ಖಾಸಗಿ ಶಾಲೆಗಳಿಗೆ ಟಿಸಿ ನೀಡಲು ಸರ್ಕಾರ ಒಂದು ವಾರ ಗಡುವು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ ಹಾಗೂ ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಮಕ್ಕಳನ್ನು ಸರ್ಕಾರಿ, ಅನುದಾನಿಕ ಶಾಲೆಗಳಿಗೆ ಸೇರಿಸಿರುವ ಮಕ್ಕಳ ಪೋಷಕರಿಗೆ ಶೈಕ್ಷಣಿಕ ಶುಲ್ಕ ಬಾಕಿ ಕಾರಣಕ್ಕಾಗಿ ವರ್ಗಾವಣೆ ಪ್ರಮಾಣ್ ಪತ್ರ (ಟಿಸಿ) ನೀಡದೆ ಸತಾಯಿಸುತ್ತಿರುವ ಅನುದಾನರಹಿತ ಖಾಸಗಿ ಶಾಲೆಗಳಿಗೆ ಟಿಸಿ ನೀಡಲು ಸರ್ಕಾರ ಒಂದು ವಾರ ಗಡುವು ನೀಡಿದೆ.

ಒಂದು ವಾರದ ಗಡುವಿನೊಳಗೆ ಟಿಸಿ ವಿತರಿಸದೆ ವಿಳಂಬ ಮಾಡುವ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರಿಗೆ ಪೋಷಕರ ಮನವಿ ಮೇರೆಗೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳವಳಿಕೆ ಪತ್ರದ ಮೂಲಕ ಮತ್ತೊಂದು ಕಾಲಾವಕಾಶ ನೀಡಬೇಕು. ಆಗಲೂ ಟಿಸಿ ನೀಡದೆ ಹೋದರೆ ಅಂತಹ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಯಾವುದೇ ಮಕ್ಕಳು ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಆದೇಶಿಸಿದ್ದಾರೆ.

ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಲಾಗದ ಸಾಕಷ್ಟು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ, ಅನುದಾನಿತ ಶಾಲೆಗಳಿಗೆ ದಾಖಲಿಸಿ, ನೂತನ ಶಾಲೆಗೆ ಟಿಸಿ ಕಳುಹಿಸುವಂತೆ ಮೊದಲಿನ ಶಾಲೆಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಬಹಳಷ್ಟು ಶಾಲೆಗಳು ಮಕ್ಕಳ ಶೈಕ್ಷಣಿಕ ಶುಲ್ಕ ಬಾಕಿ ಪಾವತಿಸಿ ಪಡೆಯುವಂತೆ ಸೂಚಿಸಿವೆ. ಶಾಲೆಗಳ ಈ ಕ್ರಮದ ವಿರುದ್ಧ ಕೆಲ ಪೋಷಕರು ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಮಕ್ಕಳ ಮೂಲಭೂತ ಹಕ್ಕಾದ ಶಿಕ್ಷಣವನ್ನು ಎತ್ತಿ ಹಿಡಿಯುವ ದಿಟ್ಟ ಹೆಜ್ಜೆ ಇದಾಗಿದೆ, ಟಿಸಿ ಕೊಡಲು ವಿಳಂಬ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲು ಇಲಾಖೆ ಆದೇಶ ನೀಡಿರುವುದು ಸ್ವಾಗತಾರ್ಹ. ಕೋವಿಡ್ 19 ಪರಿಣಾಮವಾಗಿ ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಸಲು ಉತ್ಸಾಹದಲ್ಲಿರುವ ಈ ಸಂದರ್ಭದಲ್ಲಿ ಇಂತಹ ಆದೇಶ ಜಾರಿಗೊಳಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ ಇಲಾಖೆಯ ಈ ಆದೇಶಕ್ಕೆ ಖಾಸಗಿ ಶಾಲೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಸರ್ಕಾರದ ಆದೇಶವು ಖಾಸಗಿ ಶಾಲೆಗಳ ಹಕ್ಕುಗಳಿಗೆ ವಿರುದ್ಧವಾಗಿದ್ದು, ಮಾಸಿಕ ಮತ್ತು ತ್ರೈಮಾಸಿಕ ಶುಲ್ಕದಲ್ಲಿ ನಡೆಯುವ ಬಜೆಟ್ ಶಾಲೆಗಳಿಗೆ ಹೆಚ್ಚಿನ ಹೊರೆಯಾಗುವುದರಿಂದ ಶಿಕ್ಷಣ ವ್ಯವಸ್ಥೆ ಕುಸಿಯುತ್ತದೆ ಎಂದು ಖಾಸಗಿ ಶಾಲೆಯ ಆಡಳಿತಾಧಿಕಾರಿ ರಿಯಾಜ್ ಎಸ್‌ಕೆ ಹೇಳಿದ್ದಾರೆ.

ಅಸೋಸಿಯೇಷನ್ ಆಫ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಆಫ್ ಕರ್ನಾಟಕ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಇಲಾಖೆಯ ಈ ಆದೇಶವು ಸ್ಥಳೀಯ ಶಿಕ್ಷಣ ಅಧಿಕಾರಿಗಳಿಗೆ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ದಾರಿ ಮಾಡಿಕೊಟ್ಟಿದೆ. ಶುಲ್ಕ ಕಟ್ಟಲು ಸಾಧ್ಯವಾಗದೆ ಪೋಷಕರು ಟಿಸಿ ಕೇಳುತ್ತಿದ್ದಾರೆ. ಪೋಷಕರು ಮತ್ತೆ ಸರ್ಕಾರ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಖಾಸಗಿ ಶಾಲೆಗಳಿಗೆ ಪಾವತಿಸಬೇಕಾದ ಶುಲ್ಕವನ್ನು ವಂಚಿಸಲು ಈ ಆದೇಶ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರ ಕೂಡಲೇ ಈ ಆದೇಶವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ಖಾಸಗಿ ಶಾಲೆಗಳು ತೀವ್ರವಾಗಿ ಪ್ರತಿಭಟನೆ ನಡೆಸಲಿದೆ. ಆದೇಶ ಕುರಿತು ಕಾನೂನು ಸಲಹೆಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com