ಉದ್ದೇಶಿತ ವಿಶ್ವ ದರ್ಜೆಯ ಬೆಂಗಳೂರು ಡಿಸೈನ್ ಯೋಜನೆ: ಪೂರ್ವಭಾವಿ ಸಮಾಲೋಚನೆ ನಡೆಸಿದ ಸಚಿವ ಅಶ್ವತ್ಥ ನಾರಾಯಣ

ಐದು ವರ್ಷಗಳಲ್ಲಿ 32 ಸಾವಿರಕ್ಕೂ ಹೆಚ್ಚು ನೇರ ಮತ್ತು 65 ಸಾವಿರ ಪರೋಕ್ಷ ಉದ್ಯೋಗಗಳನ್ನು  ಸೃಷ್ಟಿಸಬಲ್ಲ  ವಿಶ್ವ ದರ್ಜೆಯ ಬೆಂಗಳೂರು ವಿನ್ಯಾಸ  ವಲಯವನ್ನು (ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್) ಸ್ಥಾಪಿಸುವ ಸಂಬಂಧ ಐಟಿ ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಇಂದು ಆಸಕ್ತ ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. 
ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೇತೃತ್ವದಲ್ಲಿನ ಸಭೆಯ ಚಿತ್ರ
ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ನೇತೃತ್ವದಲ್ಲಿನ ಸಭೆಯ ಚಿತ್ರ

ಬೆಂಗಳೂರು: ಐದು ವರ್ಷಗಳಲ್ಲಿ 32 ಸಾವಿರಕ್ಕೂ ಹೆಚ್ಚು ನೇರ ಮತ್ತು 65 ಸಾವಿರ ಪರೋಕ್ಷ ಉದ್ಯೋಗಗಳನ್ನು  ಸೃಷ್ಟಿಸಬಲ್ಲ  ವಿಶ್ವ ದರ್ಜೆಯ ಬೆಂಗಳೂರು ವಿನ್ಯಾಸ  ವಲಯವನ್ನು (ಬೆಂಗಳೂರು ಡಿಸೈನ್ ಡಿಸ್ಟ್ರಿಕ್ಟ್) ಸ್ಥಾಪಿಸುವ ಸಂಬಂಧ ಐಟಿ ಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಇಂದು ಆಸಕ್ತ ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. 

ಯೋಜನೆಯು ಕಾರ್ಯರೂಪಕ್ಕೆ ಬಂದರೆ, ಇದು ದೇಶದ ಪ್ರಪ್ರಥಮ ವಿನ್ಯಾಸ ವಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಕಾಸಸೌಧದ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೈನ್ ವಿಶ್ವವಿದ್ಯಾಲಯ, ವಿಶ್ವ ವಿನ್ಯಾಸ ಸಮಿತಿ ಮತ್ತು ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಉನ್ನತ ಮಟ್ಟದ ನಿಯೋಗ ತನ್ನ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿಸಿತು. 

ಒಟ್ಟು ಐದು ವರ್ಷಗಳಲ್ಲಿ ಹಂತಹಂತವಾಗಿ ಅನುಷ್ಠಾನಕ್ಕೆ ತರಬಹುದಾದ ಈಯೋಜನೆಗಾಗಿ ಕೆಂಪೇಗೌಡ ಅಂತಾರಾಷ್ಟ್ಕೀಯ ವಿಮಾನ ನಿಲ್ದಾಣದ ಬಳಿಕ 100 ರಿಂದ 150 ಎಕರೆ ಜಮೀನಿನ ಅಗತ್ಯವಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಇದನ್ನು ಒದಗಿಸಿದರೆ ಅದನ್ನು ಖರೀದಿಸಲು ಸಿದ್ಧ ಎಂದು ನಿಯೋಗ ತಿಳಿಸಿದೆ. ಯೋಜನೆಯ ಮೊದಲ ಹಂತ 2022ರ ಜನವರಿಯಲ್ಲಿ ಆರಂಭವಾಗಿ ಡಿಸೆಂಬರ್ ನಲ್ಲಿ ಮುಗಿಯುವ ಸಂಭವವಿದೆ ಎಂದು ನಿಯೋಗ ಸಚಿವರಿಗೆ ತಿಳಿಸಿತು.

ಈಗಾಗಲೇ 6 ಡಿಸೈನ್ ಕಾಲೇಜುಗಳನ್ನು ಹೊಂದಿರುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೊರಗುತ್ತಿಗೆಗೆ ಹೆಸರಾಗಿದೆ. ಐಟಿ ಮತ್ತು ನವೋದ್ಯಮ ರಾಜಧಾನಿಯಾಗಿರುವ ಇಲ್ಲಿ ಅತ್ಯುತ್ತಮ ಮೂಲಸೌಲಭ್ಯವೂ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿನ್ಯಾಸ ವಲಯವನ್ನು ಸ್ಥಾಪಿಸಲು ಆಸಕ್ತವಾಗಿರುವುದಾಗಿ ನಿಯೋಗವು ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದೆ. ಜೊತೆಗೆ ಸರಕಾರವು ವಿನ್ಯಾಸ ವಲಯಕ್ಕೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಬೇಕಾದ ಅಗತ್ಯದ ಬಗ್ಗೆಯೂ ಅದು ಪ್ರಸ್ತಾಪಿಸಿದೆ.

ಉದ್ದೇಶಿತ ವಿನ್ಯಾಸ ವಲಯವು ವಿಶ್ವ ದರ್ಜೆಯದಾಗಿರಲಿದ್ದು, ಇಲ್ಲಿ ಕೈಗಾರಿಕಾ ವಿನ್ಯಾಸ, ಉತ್ಪನ್ನಗಳ ವಿನ್ಯಾಸ, ಅನಿಮೇಷನ್, ವಿಶುಯಲ್ ಗ್ರಾಫಿಕ್ಸ್, ಗೇಮ್ ಡಿಸೈನ್, ಡಿಜಿಟಲ್ ವಸ್ತು ವಿಷಯ, ಸ್ಮಾರ್ಟ್ ಸಿಟಿ ವಿನ್ಯಾಸ, ಶಬ್ದ ವಿನ್ಯಾಸ, ಬೊಂಬೆಗಳು, ಕಲೆ ಮತ್ತು ಕರಕುಶಲ, ವಸ್ತ್ರ, ಫ್ಯಾಷನ್ ಮತ್ತು ಆಭರಣಗಳ ವಿನ್ಯಾಸ ಎಲ್ಲವೂ ಒಂದೇ ಕಡೆ ಸಾಧ್ಯವಾಗಲಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಉಜ್ವಲ ಅವಕಾಶ ಸಿಗಲಿವೆ ಎಂದು ನಿಯೋಗವು ಹೇಳಿದೆ ಎಂದು ಸಚಿವರು ವಿವರಿಸಿದ್ದಾರೆ. 

ಉದ್ದೇಶಿತ ವಿನ್ಯಾಸ ವಲಯವು ನೂರಕ್ಕೆ ನೂರರಷ್ಟು ಪರಿಸರಸ್ನೇಹಿ ಆಗಿರಲಿದ್ದು, ಇಲ್ಲಿ ಜಾಗತಿಕ ಮಟ್ಟದ `ಬೆಂಗಳೂರು ಡಿಸೈನ್ ಉತ್ಸವ’ವನ್ನು ನಡೆಸುವ ಆಲೋಚನೆ ಇದೆ. ಇದು ಸಾಧ್ಯವಾದರೆ, ವಿನ್ಯಾಸ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಹರಿದು ಬರಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು. 

ಸಮಾಲೋಚನಾ ಸಭೆಯಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com