'ದಾನಧರ್ಮಕ್ಕೆ ಅಪ್ಪು ರಾಯಭಾರಿ': ಕಂದಾಯ ಸಚಿವ ಆರ್ ಅಶೋಕ್

ಕನ್ನಡ ಕಿರುತೆರೆ ಕವಾವಿದರು, ತಂತ್ರಜ್ಞರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(KTA) ನಿನ್ನೆ ಭಾನುವಾರ ನಗರದಲ್ಲಿ 'ಅಪ್ಪು ಅಮರ'ಗೌರವ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗವಹಿಸಿದ್ದರು.
ಕಂದಾಯ ಸಚಿವ ಆರ್ ಅಶೋಕ್ ಮತ್ತು ನಟ ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)
ಕಂದಾಯ ಸಚಿವ ಆರ್ ಅಶೋಕ್ ಮತ್ತು ನಟ ಪುನೀತ್ ರಾಜ್ ಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡ ಕಿರುತೆರೆ ಕವಾವಿದರು, ತಂತ್ರಜ್ಞರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(KTA) ನಿನ್ನೆ ಭಾನುವಾರ ನಗರದಲ್ಲಿ 'ಅಪ್ಪು ಅಮರ'ಗೌರವ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದ ಸಚಿವ ಅಶೋಕ್, ಅಪ್ಪು ಅವರು ತೀರಿಕೊಳ್ಳುವ ಒೆಂದು ವಾರಕ್ಕೆ ಮೊದಲು ಇಲ್ಲಿ ಬನಶಂಕರಿಗೆ ಹೊಟೇಲ್ ಒಂದರ ಉದ್ಘಾಟನೆಗೆ ಬಂದಿದ್ದರು. ಅವರು ತಯಾರಿಸುತ್ತಿದ್ದ ಗಂಧದ ಗುಡಿ ಸಾಕ್ಷ್ಯಚಿತ್ರದ ವಿಡಿಯೊವನ್ನು ತೋರಿಸುತ್ತೇನೆ ನಿಮಗೆ ಎಂದು ಹೇಳಿದ್ದರು. ಇನ್ನೊಂದು ದಿನ ನೋಡುತ್ತೇನೆ ಎಂದು ಹೇಳಿದ್ದೆ, ಆ ದಿನ ಬರಲೇ ಇಲ್ಲ, ಬರುವುದೂ ಇಲ್ಲ ಎಂದರು.

ವ್ಯಕ್ತಿ ಎಷ್ಟು ದಿನ ಇರುತ್ತಾನೆ ಎನ್ನುವುದು ಮುಖ್ಯವಲ್ಲ, ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಕೆಲವರು ಸತ್ತ ನಂತರವೂ ಅವರು ಮಾಡಿದ್ದ ಕೆಲಸ, ಹೆಸರು ನಿರಂತರವಾಗಿ ನೂರಾರು ವರ್ಷ ಬದುಕಿರುತ್ತಾರೆ, ಅಂತವರಲ್ಲಿ ಪುನೀತ್ ಅವರು ಕೂಡ ಒಬ್ಬರು, ಅಪ್ಪು ನಕ್ಷತ್ರವಾಗಿ ಧ್ರುವತಾರೆಯಾಗಿ ಇರುತ್ತಾರೆ ಎಂದು ನನಗೆ ಅನಿಸುತ್ತಿದೆ ಎಂದರು.

ಅಪ್ಪು ನಿಧನರಾಗಿ ಒಂದು ತಿಂಗಳ ಬಳಿಕವೂ ಅವರ ಸಮಾಧಿ ಬಳಿ ದಿನಕ್ಕೆ ಒಂದು ಸಾವಿರ ಜನ ಬಂದು ಹೋಗುತ್ತಾರೆ. ಅಪ್ಪು ಅವರಲ್ಲಿ ಮೂರು ವಿಶೇಷ ಗುಣಗಳಿವೆ. ಅವರು ಉತ್ತಮ ಕಲಾವಿದ, ಎರಡನೆಯದ್ದು ಅವರ ವಿನಯತೆ, ಅವರ ನಗು ವಿಶಿಷ್ಟವಾಗಿತ್ತು.
ಅಂದು ಅಪ್ಪು ನಿಧನರಾದ ದಿನ ನಾನು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಒಟ್ಟಿಗೆ ಇದ್ದೆವು, ನನಗೆ ಸಿಎಂ ಅಪ್ಪು ಅವರು ನಿಧನರಾದರಂತೆ ಎಂದು ಹೇಳಿದರು. ನನಗೆ ಮಾತೇ ಬರಲಿಲ್ಲ. ಸಿಎಂ ಮಾತನ್ನು ನಂಬಲೇ ಇಲ್ಲ. ಕೊನೆಗೆ ಪೊಲೀಸ್ ಆಯುಕ್ತರನ್ನು, ಡಿಜಿಯವರನ್ನು ಕರೆದು ಹೇಳಿ, ನಾನು ಹೇಳಿದರೆ ನಂಬುತ್ತಲೇ ಇಲ್ಲ ಎಂದರು. ಪೊಲೀಸ್ ಆಯುಕ್ತರು ಹೇಳಿದ ಮೇಲೆ ನಾನು ನಿಧನ ಸುದ್ದಿಯನ್ನು ನಂಬಿದೆ.

ಅಷ್ಟು ಕಟ್ಟುನಿಟ್ಟು, ಜೀವನಶೈಲಿ, ವ್ಯಾಯಾಮ, ಮೈಕಟ್ಟು ಹೊಂದಿದ್ದವರು ಹೇಗೆ ನಿಧನರಾದರು ಎಂದು ಅಚ್ಚರಿಯಾಯಿತು, ಕೊನೆಗೆ ಆಸ್ಪತ್ರೆಗೆ ಹೋದೆವು, ಅಲ್ಲಿ ಅವರ ಇಡೀ ಕುಟುಂಬವಿತ್ತು, ಈ ಸಂದರ್ಭದಲ್ಲಿ ಅವರ ಕುಟುಂಬ ನಡೆದುಕೊಂಡ ರೀತಿ ಬಹಳ ಇಷ್ಟವಾಯಿತು,ಶಾಂತ ರೀತಿಯಿಂದ ನಡೆದುಕೊಂಡಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ನಮಗೆ ಈ ಸುದ್ದಿಯನ್ನು ಹೊರಗೆ ತಿಳಿಸುವುದು ಹೇಗೆ, ಜನರನ್ನು ನಿಯಂತ್ರಿಸುವುದು, ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಆತಂಕವಾಗಿತ್ತು ಎಂದು ಸಚಿವ ಅಶೋಕ್ ವಿವರಿಸಿದರು.

ಅಪ್ಪು ಅವರು ನಿಧನ ಹೊಂದಿದ ನಂತರ ಅವರು ಸಮಾಜದ ಬಡಬಗ್ಗರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದುದು ತಿಳಿದು ಇಂದು ಹಲವರು ದಾನ-ಧರ್ಮ ಮಾಡಲು ಮುಂದಾಗುತ್ತಿದ್ದಾರೆ, ಆ ಮೂಲಕ ಅಪ್ಪು ಮಾದರಿಯಾಗಿದ್ದಾರೆ. ಇವತ್ತು ಅಪ್ಪು ಅವರು ದಾನಧರ್ಮಕ್ಕೆ ರಾಯಭಾರಿಯಾಗಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com