ಕೋವಿಡ್ ಆತಂಕದ ನಡುವೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆ ಗಳ ಚುನಾವಣೆ
ರಾಜ್ಯದಲ್ಲಿ ಹೊಸ ಕೋವಿಡ್ -19 ಕ್ಲಸ್ಟರ್‌ಗಳ ರಚನೆಯ ಭೀತಿ ಮತ್ತು ಒಮಿಕ್ರಾನ್ ರೂಪಾಂತರದ ಆತಂಕದ ನಡುವೆ, ರಾಜ್ಯ ಚುನಾವಣಾ ಆಯೋಗವು ಸೋಮವಾರ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.
Published: 30th November 2021 08:39 AM | Last Updated: 30th November 2021 08:44 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಹೊಸ ಕೋವಿಡ್ -19 ಕ್ಲಸ್ಟರ್‌ಗಳ ರಚನೆಯ ಭೀತಿ ಮತ್ತು ಒಮಿಕ್ರಾನ್ ರೂಪಾಂತರದ ಆತಂಕದ ನಡುವೆ, ರಾಜ್ಯ ಚುನಾವಣಾ ಆಯೋಗವು ಸೋಮವಾರ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.
ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30 ರಂದು ಮತಗಳ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ನಡೆಯಲಿರುವ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಉಳಿದಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಈ ಚುನಾವಣೆ ಮೂರನೇ ಪ್ರಮುಖ ಪರೀಕ್ಷೆಯಾಗಿದೆ. ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪಕ್ಷವು ಕೇವಲ ಸಿಂದಗಿಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಡಿಸೆಂಬರ್ 10 ರಂದು ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ, ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿರುವ ಹಾನಗಲ್‌ನಲ್ಲಿ ಬಿಜೆಪಿಯ ಹೀನಾಯ ಸೋಲಿನ ನಂತರ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಮರುಸ್ಥಾಪಿಸಲು ಬೊಮ್ಮಾಯಿ ಅವರಿಗೆ ಮತ್ತೊಂದು ಪರೀಕ್ಷೆಯಾಗಿದೆ.
ಇದೀಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬೊಮ್ಮಾಯಿ ಅವರಿಗೆ ಮತ್ತೊಂದು ಸವಾಲಾಗಿದೆ. ಐದು ನಗರ ಪಾಲಿಕೆಗಳ 1,185 ವಾರ್ಡ್‌ಗಳು, 19 ಪಟ್ಟಣ ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಅಲ್ಲದೆ, ಚಿಕ್ಕಮಗಳೂರು, ಸಿರಾ, ಗದಗ-ಬೆಟಗೇರಿ ಮತ್ತು ಹೊಸಪೇಟೆ ಸೇರಿದಂತೆ ನಾಲ್ಕು ನಗರ ಪಾಲಿಕೆಗಳಿಗೆ ಅಥಣಿ, ಅಣ್ಣಿಗೇರಿ ಮತ್ತು ಬಂಕಾಪುರ ಪಟ್ಟಣ ಪುರಸಭೆಗಳ 209 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ.
ಇದರೊಂದಿಗೆ ಬೆಂಗಳೂರು ನಗರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಸಿಎಂಸಿ, ಟಿಎಂಸಿ ಮತ್ತು ಪಟ್ಟಣ ಪಂಚಾಯಿತಿಗಳಿಂದ 976 ವಾರ್ಡ್‌ಗಳಿಗೂ ಚುನಾವಣೆ ನಡೆಯಲಿದೆ. ಚಾಮರಾಜನಗರ, ದಾವಣಗೆರೆ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಬೆಳಗಾವಿ, ವಿಜಯಪುರ, ಕಲಬುರಗಿ, ಹಾವೇರಿ ಮತ್ತು ಬಾಗಲಕೋಟೆಯ ವಿವಿಧ ಸಿಎಂಸಿ, ಟಿಎಂಸಿ ಮತ್ತು ಪಟ್ಟಣ ಪಂಚಾಯಿತಿಗಳಿಗೂ ಉಪಚುನಾವಣೆ ನಡೆಯಲಿದೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನಿರ್ದೇಶನದ ನಂತರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದೆ. ರಾಜ್ಯ ಸರ್ಕಾರ ನವೆಂಬರ್ 27 ರಂದು ಈ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸಿತ್ತು.