ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹೇಳಿದ್ದೇನು?

ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಹೊಸ ವರ್ಷಾಚರಣೆ ಮೇಲೆ ಕರಿನೆರಳು ಆವರಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ಹೊಸ ವರ್ಷ ಆಚರಣೆಗೆ ಬ್ರೇಕ್‌ ಬೀಳುವ ಸಾಧ್ಯತೆಯಿದೆ.
ಗೌರವ್ ಗುಪ್ತ
ಗೌರವ್ ಗುಪ್ತ

ಬೆಂಗಳೂರು: ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಹೊಸ ವರ್ಷಾಚರಣೆ ಮೇಲೆ ಕರಿನೆರಳು ಆವರಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ಹೊಸ ವರ್ಷ ಆಚರಣೆಗೆ ಬ್ರೇಕ್‌ ಬೀಳುವ ಸಾಧ್ಯತೆಯಿದೆ.

ನೂತನ ವರ್ಷಾಚರಣೆಗೆ ಅವಕಾಶ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಆಯುಕ್ತ ಗೌರವ್‌ಗುಪ್ತಾ, ಮುಂದಿನ ನಾಲ್ಕೈದು ದಿನಗಳಲ್ಲಿ ಈ ಬಗ್ಗೆ ಒಂದು ಚಿತ್ರಣ ದೊರೆಯಲಿದೆ. ಹೀಗಾಗಿ ಹೊಸ ವರ್ಷ ಸಂಭ್ರಮಾಚರಣೆ ಅನುವು ನೀಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಆಲೋಚನೆ ಮಾಡಿಲ್ಲ.

ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಹೊಸ ರೂಪಾಂತರದ ತಳಿಯ ಬಗ್ಗೆ ಎಚ್ಚರಿಕೆ ವಹಿಸ ಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕಂಡು ಬಂದಿರುವ ಒಮಿಕ್ರಾನ್‌ ಹೊಸ ರೂಪಾಂತರ ತಿಳಿಯ ಪರಿಣಾಮ ಯಾವ ರೀತಿಯಾಗಿರಲಿದೆ ಎಂಬ ಬಗ್ಗೆ ಸ್ಪಷ್ಟವಾದ ಚಿತ್ರಣವಿಲ್ಲ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ರಾಜ್ಯ ಸರ್ಕಾರವು ಪರಿಸ್ಥಿತಿ ಅವಲೋಕಿಸುತ್ತಿದ್ದು ಕೊರೊನಾ ಪ್ರಕರಣ ಗಳು ಕೆಲವೆಡೆ ಮತ್ತೆ ಹೆಚ್ಚಾಗುತ್ತಿರುವುದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆಗೆ ಅವಕಾಶ ನೀಡಬೇಕೇ ಬೇಡವೇ ಎಂಬ ಚಿಂತನೆಯಲ್ಲಿದೆ. ಮುಂದಿನ 7 -8 ದಿನಗಳಲ್ಲಿ ಪರಿಸ್ಖಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತು ತಜ್ಞರೊಂದಿಗೆ ಪರಿಸ್ಥಿತಿಯನ್ನು ನಿರ್ಣಯಿಸಲು ಸಭೆ ನಡೆಸಿದರು.  ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಎಲ್ಲಾ ಸಲಹೆಗಳನ್ನು ಪಾಲಿಸಲು ನಿರ್ಧರಿಸಲಾಗಿದೆ. ಜೊತೆಗೆ ತಜ್ಞರು ಮತ್ತು ಟಿಎಸಿ ಸದಸ್ಯರು ಕೂಡ ಪ್ರತಿದಿನ ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಗುಪ್ತಾ ಹೇಳಿದರು.

ಅಂತಾರಾಷ್ಟ್ರೀಯ ಪ್ರಯಾಣಗಳ ಬಗ್ಗೆ ತೀವ್ರವಾದ ನಿಗಾ ವಹಿಸಬೇಕಾಗುತ್ತದೆ. ಏರ್ಪೋರ್ಟ್‌ನಿಂದ ಬರುವ ಎಲ್ಲರ ಟೆಸ್ಟ್ ಮಾಡಲಾಗುತ್ತಿದೆ. ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್ ಕೂಡ ಮಾಡಲಾಗುವುದು ಎಂದು ವಿವರಿಸಿದರು.ಹೊಸ ವೈರಸ್ ತಳಿಯ ರೋಗಲಕ್ಷಣಗಳ ಬಗ್ಗೆ, ಹರಡುವಿಕೆಯ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಸ್ಪಷ್ಟ ಚಿತ್ರಣ ಬರಬಹುದು. ನಂತರ ಹೊಸ ವರ್ಷದ ಸಂಭ್ರಮ, ಇತರೆ ಹಬ್ಬಗಳ ಆಚರಣೆಗೆ ಅನುಮತಿ ನೀಡಲಾಗುವುದು ಎಂದರು.

ರಾಜ್ಯ ಆರೋಗ್ಯ ಇಲಾಖೆ ಸಭೆ ಮಂಗಳವಾರ ನಡೆಯಲಿದ್ದು, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.  ಹೊಸ ವರ್ಷದ ಆಚರಣೆಯ ಬಗ್ಗೆ ಪರಿಸ್ಥಿತಿ ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

ಮಾಸ್ಕ್ ನಿಯಮ ಇಂದಿಗೂ ಜಾರಿಯಲ್ಲಿದೆ. 54 ಮಾರ್ಷಲ್ಸ್ ತಂಡ ಈ ಬಗ್ಗೆ ನಿಗಾವಹಿಸುತ್ತದೆ . ಇನ್ನು ನಾಳೆ ತಜ್ಞರ ಸಮಿತಿ ಜೊತೆ ರಾಜ್ಯ ಸರ್ಕಾರ ಸಭೆ ನಡೆಸಲಿದೆ. ಬಿಬಿಎಂಪಿಯೂ ಪಾಲ್ಗೊಳ್ಳಲಿದೆ. ನಗರದಲ್ಲಿ ಏನೇನು ಕಡಿವಾಣಗಳನ್ನು ಹಾಕಬೇಕು ಎಂಬ ಬಗ್ಗೆ ಸರ್ಕಾರದ ಸೂಚನೆಯಂತೆ ನಡೆಯಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com