ನೀರಿನ ಹೊಂಡದಲ್ಲಿ ಗಜ ಪ್ರಸವ; ಹರಸಾಹಸ ಪಟ್ಟು ಆನೆ ಮರಿ ರಕ್ಷಿಸಿದ ಅರಣ್ಯ ಸಿಬ್ಬಂದಿ, ತಾಯಿ ಆನೆಯಿಂದಲೇ ಮರಿ ಸಾವು!

ನೀರಿನ ಹೊಂಡದಲ್ಲಿ ಮರಿಗೆ ಜನ್ಮ ನೀಡಿದ ಆನೆಯೊಂದು ಬಳಿಕ ತನ್ನ ಮರಿಯನ್ನೇ ಎತ್ತಿ ಬಿಸಾಡಿ ಅದರ ಸಾವಿಗೆ ಕಾರಣವಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಡಿಕೇರಿ: ನೀರಿನ ಹೊಂಡದಲ್ಲಿ ಮರಿಗೆ ಜನ್ಮ ನೀಡಿದ ಆನೆಯೊಂದು ಬಳಿಕ ತನ್ನ ಮರಿಯನ್ನೇ ಎತ್ತಿ ಬಿಸಾಡಿ ಅದರ ಸಾವಿಗೆ ಕಾರಣವಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಕುಶಾಲನಗರ ಸಮೀಪದ ಹೊಸಕೋಟೆಯಲ್ಲಿ ಈ ಘಟನೆ ನಡೆದಿದ್ದು, ರಕ್ಷಿಸಲ್ಪಟ್ಟ ಆನೆ ಮರಿಯೊಂದು ತಾಯಿಯೊಂದಿಗೆ ಸೇರಿದಾಗ ಮೃತಪಟ್ಟಿದೆ. ಸೋಮವಾರ ತಡರಾತ್ರಿ ಕಾಡಾನೆಗೆ ಹೆರಿಗೆ ನೋವು ಕಾಣಿಸಿಕೊಂಡು ಖಾಸಗಿ ಎಸ್ಟೇಟ್‌ನ ನೀರಿನ ಹೊಳೆಯಲ್ಲಿ ಮರಿಗೆ ಜನ್ಮ ನೀಡಿದೆ.

ಆನೆ ಮರಿ ಬಹಳ ಹೊತ್ತು ನೀರಿನಲ್ಲಿ ಇದ್ದಿದ್ದರಿಂದ ಅದು ಅಪಾಯಕ್ಕೆ ಸಿಲುಕಿತ್ತು. ಅಲ್ಲದೆ ತಾಯಿ ಆನೆ ಮತ್ತು ಮರಿ ಆನೆ ಕೂಗುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಕುಶಾಲನಗರ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕುಶಾಲನಗರ ಆರ್‌ಎಫ್‌ಒ ಅಣ್ಣಯ್ಯ ಕುಮಾರ್ ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೆ ಮರಿ ನೀರಿನಲ್ಲಿ ಹೆಚ್ಚು ಹೊತ್ತು ಇದ್ದರೆ ಅದರ ಪ್ರಾಣಕ್ಕೆ ಅಪಾಯ ಎಂದು ಮರಿ ರಕ್ಷಿಸುವ ಕಾರ್ಯಾಚರಣೆಗೆ ಮುಂದಾದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆಯವರು ತಾಯಿ ಆನೆಯನ್ನು ಓಡಿಸಿ ಮರಿಯನ್ನು ನೀರಿನ ಹೊಂಡದಿಂದ ಮೇಲಕ್ಕೆತ್ತಿದ್ದಾರೆ. ನಂತರ ಮರಿಯನ್ನು ಅರಣ್ಯ ಪ್ರದೇಶದಲ್ಲಿ ಇರಿಸಲಾಗಿತ್ತು. 

ಆನೆ ಮರಿ ತುಂಬಾ ಹೊತ್ತು ನೀರಿನಲ್ಲಿ ಇದ್ದುದರಿಂದ ಅದು ತುಂಬಾ ಸುಸ್ತಾಗಿ ನಿತ್ರಾಣಗೊಂಡಿತ್ತು. ಇತ್ತ ತಾಯಿ ಆನೆ ಇತರೆ ಆನೆಗಳೊಂದಿಗೆ ತನ್ನ ಮರಿಯ ವಾಸನೆಯನ್ನು ಪತ್ತೆ ಹಚ್ಚಿ ಅದರ ಬಳಿಗೆ ಮರಳಿದೆ. ಈ ವೇಳೆ ಮರಿ ಆನೆ ನಿಷ್ಚಲವಾಗಿರುವುದನ್ನು ಕಂಡು 2-3 ಬಾರಿ ಮರಿಯನ್ನು ಅಲುಗಾಡಿಸಿದೆ. ಈ ವೇಳೆ ಸುಸ್ತಾಗಿ ನಿತ್ರಾಣವಾಗಿದ್ದ ಮರಿ ಆನೆ ಕದಲದೇ ಬಿದ್ದಿತ್ತು. ಮರಿ ಆನೆ ನಿಶ್ಚಲವಾಗಿರುವುದನ್ನು ಕಂಡ ತಾಯಿ ಆನೆ ಅದನ್ನು ಸೊಂಡಿಲಿನಿಂದ ಎತ್ತಿ ಮತ್ತೆ ನೀರಿನ ಹೊಂಡಕ್ಕೆ ಎಸೆದಿದೆ. ಈ ವೇಳೆ ಆನೆ ಮೃತಪಟ್ಟಿಗೆ ಎಂದು ಆರ್ ಎಫ್ ಒ ಅಣ್ಣಯ್ಯ ಹೇಳಿದ್ದಾರೆ. 

ಇನ್ನು ಮರಿ ಆನೆಯನ್ನು ನೋಡಲು ಬಂದಿದ್ದ ಆನೆಗಳ ಹಿಂಡಿನಲ್ಲಿ ಹಿರಿಯ ಆನೆ ಇರಲಿಲ್ಲ. ಹೀಗಾಗಿ ಈ ಆನೆಗೆ ಇದು ಪ್ರಸವ ಮೊದಲನೆ ಪ್ರಸವವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಮರಿ ಆನೆಯ ದೇಹವನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಾಡಿನೊಳಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com