ಬೆಂಗಳೂರು: ಯುಬಿಬಿಪಿ ಕಾರ್ಡ್ ಕಳವು ಮಾಡುತ್ತಿದ್ದ ವ್ಯಕ್ತಿ ಬಂಧನ, 30 ಲಕ್ಷ ರೂ. ಮೌಲ್ಯದ ಕಾರ್ಡ್ ವಶ

ಮೊಬೈಲ್ ನೆಟ್ ವರ್ಕ್ ಟವರ್ ಗಳಲ್ಲಿ ಅಳವಡಿಸುವ ಯುಬಿಬಿಪಿ ಕಾರ್ಡ್ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೊಬೈಲ್ ನೆಟ್ ವರ್ಕ್ ಟವರ್ ಗಳಲ್ಲಿ ಅಳವಡಿಸುವ ಯುಬಿಬಿಪಿ ಕಾರ್ಡ್ ಕಳವು ಮಾಡುತ್ತಿದ್ದ ಆರೋಪಿಯನ್ನು ಉತ್ತರ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಕಲಬುರಗಿ ಮೂಲದ ಆರೋಪಿ ಓರ್ವನನ್ನು ಬಂಧಿಸಿ, ಬಂಧಿತನಿಂದ 30 ಲಕ್ಷ ರೂ. ಮೌಲ್ಯದ 19 ಯುಬಿಬಿಪಿ ಕಾರ್ಡ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಐಟಿಐ ವ್ಯಾಸಂಗ ಮಾಡಿದ್ದು, ಎರಡು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದನು. ಕೋವಿಡ್ ಸಮಯದಲ್ಲಿ ಕೆಲಸ ಬಿಟ್ಟು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದನು. ಹೀಗಾಗಿ ಎಂಜಿನಿಯರ್ ಆಗಿದ್ದರಿಂದ ಟವರ್ ಗಳ ಮಾಹಿತಿ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಅದಕ್ಕೆ ಯುನಿವರ್ಸ್ ಕೀ ಅಳವಡಿಸಿದ್ದನ್ನು ಗಮನಿಸಿಕೊಂಡು ಅದರಲ್ಲಿರುವ ಯುಬಿಬಿಪಿ ಕಾರ್ಡ್ ಗಳ ಬೆಲೆ ತಿಳಿದಿದ್ದ ಆತ ಕಳವು ಮಾಡಿ ಹಣಗಳಿಸುವ ಸಂಚೂ ರೂಪಿಸಿದ್ದ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಳವು ಮಾಡಿದ್ದ ಕಾರ್ಡ್ ಗಳನ್ನು ಮಾರಾಟ ಮಾಡಲು ಯತ್ನಿಸಿದ್ದನು. ಆದರೆ, ಸಾರ್ವಜನಿಕರು ಕೊಂಡುಕೊಳ್ಳಲು ನಿರಾಕರಿಸಿದ್ದರಿಂದ 12 ಯುಬಿಬಿಪಿ ಕಾರ್ಡ್ ತನ್ನ ಬಳಿಯೇ ಇಟ್ಟುಕೊಂಡಿದ್ದನು. ಉಳಿದ 7 ಕಾರ್ಡ್ ಗಳನ್ನು 500 ರೂ. ಗೆ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಂಧನದಿಂದ ಪೀಣ್ಯ, ಕೋಣನಕುಂಟೆ, ಪುಲಿಕೇಶಿ ನಗರ, ಕಾಡುಗೊಂಡನಹಳ್ಳಿ, ಬನಶಂಕರಿ, ಸುಬ್ರಮಣ್ಯಪುರ ಪೊಲೀಸ್ ಠಾಣೆ ಸೇರಿ ಒಟ್ಟು 9 ಕಳವು ಪ್ರಕರಣಗಳು ಇತ್ಯಾರ್ಥಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯ ಪೊಲೀಸ್ ಇನ್ಸ್ ಪೆಕ್ಟರ್ ಎಂ ಬಾಲಾಜಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com