ಕರ್ನಾಟಕದಲ್ಲಿ ಸಿಗರೇಟ್, ಬೀಡಿ ಬಳಕೆ ಅತ್ಯಧಿಕ: ವರದಿ

ದೇಶದಲ್ಲಿನ ಗರಿಷ್ಠ ಪ್ರಮಾಣದಲ್ಲಿ ಸಿಗರೇಟ್, ಬೀಡಿ ಅತ್ಯಧಿಕ ಬಳಕೆ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿನ ಗರಿಷ್ಠ ಪ್ರಮಾಣದಲ್ಲಿ ಸಿಗರೇಟ್, ಬೀಡಿ ಅತ್ಯಧಿಕ ಬಳಕೆ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.

ದೇಶದ ಆರು ರಾಜ್ಯಗಳಲ್ಲಿ ಕರ್ನಾಟಕ, ಅಸ್ಸಾಂ, ಗುಜರಾತ್, ಒಡಿಶಾ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ತಂಬಾಕು ನಿಯಂತ್ರಣದ ಸಂಶೋಧನೆ ನಡೆದಿದ್ದು, ಈ ಪೈಕಿ ಕರ್ನಾಟಕದಲ್ಲಿ ಸಿಗರೇಟ್ ಧೂಮಪಾನದ ಪ್ರಮಾಣವು ಶೇ.63.68ರಷ್ಟುಹೆಚ್ಚಾಗಿದೆ. ತಂಬಾಕು ನಿಯಂತ್ರಣದ ನೆಲಮಟ್ಟದ ಅನುಷ್ಠಾನವು ಈ ರಾಜ್ಯಗಳಲ್ಲಿ ಕೊರತೆಯಲ್ಲಿದೆ ಮತ್ತು ಅದನ್ನು ಸುಧಾರಿಸುವ ತುರ್ತು ಅಗತ್ಯವಿದೆ ಎಂದು ವರದಿಯು ಹೇಳಿದೆ.

ಆರೋಗ್ಯ, ಲಿಂಗ ಮತ್ತು ಕಾರ್ಮಿಕ ಸಮಸ್ಯೆಗಳ ಕುರಿತು ಏಷ್ಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಶೋಧನಾ ಸಂಸ್ಥೆ ಎಎಫ್ ಡೆವಲಪ್‌ಮೆಂಟ್ ಕೇರ್ (ಎಎಫ್‌ಡಿಸಿ) ನಡೆಸಿದ ಅಧ್ಯಯನವು ತಂಬಾಕು ನಿಯಂತ್ರಣದ (ಎಫ್‌ಸಿಟಿಸಿ) ನಿಯಮಗಳ ಅಡಿಯಲ್ಲಿ ಡಬ್ಲ್ಯುಎಚ್‌ಒ ಫ್ರೇಮ್‌ವರ್ಕ್ ಕನ್ವೆನ್ಶನ್ ಅಡಿಯಲ್ಲಿ ಒಳಗೊಂಡಿರುವ ತಂಬಾಕು ನಿಯಂತ್ರಣ ಕ್ರಮಗಳ ಅನುಷ್ಠಾನದ ಹಾಲಿ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಅಧ್ಯಯನ ನಡೆಸಿತು. ಭಾರತದಲ್ಲಿ (2004-2020) ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗಿಂತ ನಗರ ಪ್ರದೇಶದ ಜನರು ಸಿಗರೇಟ್ ಸೇವಿಸುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವು ತಿಳಿಸಿದೆ. 

ಅಧ್ಯಯನದ ಪ್ರಕಾರ, ಸುಮಾರು ಶೇ.58ರಷ್ಟು ನಗರ ವಾಸಿಗಳು ಸಿಗರೇಟ್ ಸೇದುತ್ತಾರೆ, ಆದರೆ ಶೇ.43 ಜನರು ಮಾತ್ರ ಗ್ರಾಮೀಣ ಭಾಗದದಲ್ಲಿ ಧೂಮಪಾನ ಮಾಡುತ್ತಾರೆ ಎನ್ನಲಾಗಿದೆ. ಈ ಪೈಕಿ 18 ವರ್ಷಕ್ಕಿಂತ ಮೇಲ್ಪಟ್ಟ ಸಿಗರೇಟ್ ಧೂಮಪಾನಿಗರ ಪ್ರಮಾಮವು ಕರ್ನಾಟಕದಲ್ಲಿ ಅತಿ ಹೆಚ್ಚು, ಅಂದರೆ ಶೇ.63.68ರಷ್ಟಿದ್ದು, ಇದೇ ಪ್ರಮಾಣ ಒಡಿಶಾದಲ್ಲಿ 62.5ರಷ್ಟಿದೆ. ಅಸ್ಸಾಂನಲ್ಲಿ ಶೇ.48.37ರಷ್ಟು, ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.45.95ರಷ್ಟಿದ್ದು, ಗುಜರಾತ್‌ನಲ್ಲಿ ಅತ್ಯಂತ ಕಡಿಮೆ ಅಂದರೆ ಶೇ.33.18ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಂಬಾಕು ಸೇವಿಸುವವರಲ್ಲಿ ಬೀಡಿ ಸೇದುವುದು ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ ಶೇ.36.32ರಷ್ಟಿದ್ದು, ಹೊಗೆರಹಿತ ತಂಬಾಕು (ಎಸ್‌ಎಲ್‌ಟಿ) ವಿಚಾರದಲ್ಲಿ ಅಂದರೆ ಗುಟ್ಕಾ ಬಳಕೆಯಲ್ಲಿ ಗುಜರಾತ್‌ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ ಬಳಕೆಯ ಪ್ರಮಾಣ ಶೇ.69.16ರಷ್ಟಿದೆ. ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು ಇಲ್ಲಿ ಬಳಕೆಯ ಪ್ರಮಾಣ ಶೇ.24.2 ರಷ್ಟಿದೆ.. ಒಡಿಶಾ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಈ ಪ್ರಮಾಣ ಶೇ.40 ಕ್ಕಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

AFDC ಯ ಪ್ರಧಾನ ತನಿಖಾಧಿಕಾರಿ ಮತ್ತು ನಿರ್ದೇಶಕರಾದ ಸಚಿ ಸತಪತಿ ಅವರು ಈ ಬಗ್ಗೆ ಮಾತನಾಡಿದ್ದು, ಈ ಅಧ್ಯಯನವನ್ನು ಜನವರಿ ಮತ್ತು ಏಪ್ರಿಲ್ 2021 ರ ನಡುವೆ ನಡೆಸಲಾಗಿದೆ.  ಈ ವರದಿಯನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸಲಾಗಿದ್ದು, ಆರು ರಾಜ್ಯಗಳ ಸಮೀಕ್ಷೆಯನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ತಂಬಾಕು ಸೇವನೆಯ ಹೆಚ್ಚಳವನ್ನು ಆಧರಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಂತೆಯೇ 'ಒಳಾಂಗಣ ಧೂಮಪಾನದ ನೀತಿಯ ಬಗ್ಗೆ ತಿಳುವಳಿಕೆ' ಕುರಿತ ವಿಶ್ಲೇಷಣೆಯು ಕರ್ನಾಟಕದ ಒಟ್ಟಾರೆ ಧೂಮಪಾನಿಗಳಲ್ಲಿ ಒಳಾಂಗಣ ಧೂಮಪಾನ ಮಾಡುವವರ ಸಂಖ್ಯೆ ಶೇ.53.64ರಷ್ಟಿದೆ. ಇವರು ಕೆಲವು ಒಳಾಂಗಣ ಪ್ರದೇಶಗಳಲ್ಲಿ ಧೂಮಪಾನವನ್ನು ಅನುಮತಿಸಲಾಗಿದೆ ಎಂದು ನಂಬುತ್ತಿದ್ದಾರೆ. ಹೀಗಾಗಿ ಸರ್ಕಾರವು ತನ್ನ ತಂಬಾಕು ನೀತಿಯನ್ನು ಬಲಪಡಿಸಬೇಕಾಗಿದೆ ಮತ್ತು ಅದನ್ನು ಸಾರ್ವಜನಿಕ ಪಡಿಸಬೇಕಿದೆ ಎಂದು  ಶತಪತಿ ಹೇಳಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, WHO-FCTC ಫೆಬ್ರವರಿ 27, 2005 ರಂದು ಜಾರಿಗೆ ಬಂದಿತು. 2018 ರಲ್ಲಿ, WHO-FCTC ಯ ಅನುಷ್ಠಾನದಲ್ಲಿ ತಂಬಾಕು ನಿಯಂತ್ರಣವನ್ನು ವೇಗಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ನಿಯಮಗಳನ್ನು ಅಳವಡಿಸಿಕೊಂಡಿತು. ಈಗ ಮೂರು ವರ್ಷಗಳಾಗಿವೆ, ಆದರೆ ಗುರಿಯತ್ತ ಪ್ರಗತಿಯ ಬಗ್ಗೆ ಯಾವುದೇ ವರದಿಯಿಲ್ಲ ಎಂದೂ ವರದಿ ಹೇಳಿದೆ.

ಅನುಷ್ಠಾನವನ್ನು ಸುಧಾರಿಸಲು ಅಧ್ಯಯನವನ್ನು ನಿರ್ದಿಷ್ಟ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. "ಅಧ್ಯಯನವು ನೆಲದ ಮಟ್ಟದ ನಿಯಂತ್ರಕ ಅನುಷ್ಠಾನದ ಕೊರತೆಯನ್ನು ಕಂಡುಕೊಂಡಿದೆ. ಹತ್ತಿರದ ಯಾವುದೇ ಅಂಗಡಿಯಲ್ಲಿ ಅಪ್ರಾಪ್ತ ವಯಸ್ಕರು ತಂಬಾಕು ಉತ್ಪನ್ನಗಳನ್ನು ಯಾವುದೇ ತಡೆ ಇಲ್ಲದೇ ಖರೀದಿಸಬಹುದಾಗಿದೆ. ಇದು ಈ ಪ್ರಮಾಣ ಹೆಚ್ಚಾಗಲು ಕಾರಣ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಭಾರತದಲ್ಲಿ ಒಳಾಂಗಣ ತಂಬಾಕು ಬಳಕೆಯ ನೀತಿಯ ಅನಿಯಮಿತ ಅನುಷ್ಠಾನವಿದೆ. ಅಂತಹ ನೀತಿ ಇದೆ ಎಂದು ತಮಗೆ ತಿಳಿದಿಲ್ಲ ಎಂದು ಅನೇಕ ಜನರು ವರದಿ ಮಾಡಿದ್ದಾರೆ. ತಂಬಾಕು ಉತ್ಪನ್ನಗಳಿಗೆ ಜನರು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಹೆಚ್ಚಿನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವಂತಹ ಹೊಸ ನಿಯಂತ್ರಣ ಮತ್ತು ಅನುಸರಣಾ ಕಾರ್ಯವಿಧಾನವನ್ನು ಕೇಂದ್ರ ಸರ್ಕಾರವು ತರಬಹುದು ಎಂದು ಅವರು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com