ಬಾಲಕಿಗೆ ಲೈಂಗಿಕ ಕಿರುಕುಳ ಆರೋಪಿ ಖುಲಾಸೆ: ಮರು ವಿಚಾರಣೆ ನಡೆಸುವಂತೆ ಕೆಳ ಹಂತದ ಕೋರ್ಟ್ ಗೆ ಹೈಕೋರ್ಟ್ ಆದೇಶ

ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ಆರೋಪಿಯಾಗಿದ್ದಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದ್ದು, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಆದೇಶಿಸಿ, ತೀರ್ಪು ನೀಡಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿ ಆರೋಪಿಯಾಗಿದ್ದಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಈಚೆಗೆ ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದ್ದು, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೆಳ ಹಂತದ ನ್ಯಾಯಾಲಯಕ್ಕೆ ಆದೇಶಿಸಿ, ತೀರ್ಪು ನೀಡಿದೆ.

ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಫೆಬ್ರವರಿ ಒಂದರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಿಆರ್ ಪಿಸಿ ಸೆಕ್ಷನ್ 378(1) ಮತ್ತು (3)ರ ಅಡಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಎಂ ಐ ಅರುಣ್ ಅವರಿದ್ದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಮರು ವಿಚಾರಣೆ ನಡೆಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಿರುವ ಹೈಕೋರ್ಟ್, ಅಗತ್ಯ ಸಾಕ್ಷ್ಯಾಧಾರ ಸಲ್ಲಿಸಲು ಪ್ರಾಸಿಕ್ಯೂಷನ್ಗೆ ಸ್ವಾತಂತ್ರ್ಯ ಕಲ್ಪಿಸಬೇಕು ಕೆಳ ನ್ಯಾಯಾಲಯಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರು ತಾಲ್ಲೂಕಿನ  ಕಾಫಿ ತೋಟವೊಂದರಲ್ಲಿ  ಕೂಲಿ ಕಾರ್ಮಿಕರಾಗಿ ನಮ್ಮ ಕುಟುಂಬ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳಿಂದ ಅದೇ ತೋಟದಲ್ಲಿ ಕಾರ್ಮಿಕನಾಗಿ ೧೯ ವರ್ಷದ ಸಂತೋಷ್ ಎಂಬಾತ ಕೆಲಸಕ್ಕೆ ಸೇರಿದ್ದ. ೧೦ನೇ ತರಗತಿ ವಿದ್ಯಾರ್ಥಿನಿಯಾದ ಪುತ್ರಿ ಮತ್ತು ಸಂತೋಷ್ ಪ್ರೇಮಪಾಶಕ್ಕೆ ಒಳಗಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪುತ್ರಿಯನ್ನು ವಿವಾಹವಾಗುವುದಾಗಿ ಆಕೆಯ ಜೊತೆ ಒತ್ತಾಯಪೂರ್ವಕವಾಗಿ ಸಂತೋಷ್ ಸಂಭೋಗ ನಡೆಸಿದ್ದ. ಕಳೆದ ೨೦ ದಿನಗಳಿಂದ ಆತ ಯಾರಿಗೂ ಹೇಳದೇ ತವರಿಗೆ ತೆರಳಿದ್ದಾನೆ. ಸದ್ಯ ಪುತ್ರಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಸಂತೋಷ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು ಎಂದು ಸಂತ್ರಸ್ತೆಯ ತಂದೆ ೨೦೧೯ರ ಏಪ್ರಿಲ್ ೨೯ರಂದು ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಂತ್ರಸ್ತೆ ಹೇಳಿಕೆ ದಾಖಲು: ತಂದೆಯ ದೂರಿನ ಮೇರೆಗೆ ಪೊಲೀಸರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ತಂದೆ ದೂರಿನಲ್ಲಿ ಹೇಳಿದ್ದನ್ನೇ ಆಕೆಯು ಪೊಲೀಸರ ಮುಂದೆ ದಾಖಲು ಮಾಡಿದ್ದಳು. ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಆಕೆಯು ೩೨ ವಾರಗಳ ಗರ್ಭವತಿಯಾಗಿದ್ದಾಳೆ ಎಂದು ವೈದ್ಯಕೀಯ-ಕಾನೂನು ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ಆರೋಪಿ ಸಂತೋಷ್ ವಿರುದ್ಧ ಪೋಕ್ಸೊ ಕಾಯಿದೆ- 2012ರ ಸೆಕ್ಷನ್ 5(ಜೆ) (ii) ಮತ್ತು 6 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(2) (ಎನ್) ಅಡಿ ದೂರು ದಾಖಲಿಸಲಾಗಿತ್ತು.

ಉಲ್ಟಾ ಹೊಡೆದ ಸಂತ್ರಸ್ತೆ ಹಾಗೂ ಕುಟುಂಬ: ಆರೋಪಿ ಸಂತೋಷ್  ಸುಳ್ಳುಗಳ ಭರವಸೆಗಳಿಗೆ ಮಾರುಹೋದ ದೂರುದಾರರಾದ ಸಂತ್ರಸ್ತೆಯ ತಂದೆ, ತಾಯಿ, ಸಹೋದರ-ಸಹೋದರಿ ಎಲ್ಲರೂ ಪ್ರಾಸಿಕ್ಯೂಷನ್ ಗೆ  ವಿರುದ್ಧವಾಗಿ ಸಾಕ್ಷಿ ನುಡಿದಿದ್ದರು. ದೂರಿನಲ್ಲಿನ ಅಂಶಗಳು ಹಾಗೂ ಪೊಲೀಸರ ಮುಂದೆ ಸಂತ್ರಸ್ತೆ ದಾಖಲಿಸಿದ್ದ ಹೇಳಿಕೆಯನ್ನು ನಿರಾಕರಿಸಲಾಗಿತ್ತು. ಆರೋಪಿ ಬಲಾತ್ಕಾರದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದರಿಂದ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಇದನ್ನು ಆಧರಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಪ್ರತಿಕೂಲ ಸಾಕ್ಷ್ಯದ ಹಿನ್ನೆಲೆಯಲ್ಲಿ ಆರೋಪಿ ಸಂತೋಷ್ ನ್ನು  ಖುಲಾಸೆಗೊಳಿಸಿತ್ತು.

ಆರೋಪಿಯ ಸುಳ್ಳು ಭರವಸೆಗಳ ಹಿನ್ನೆಲೆಯಲ್ಲಿ ಸಾಕ್ಷಿಗಳು ಪ್ರಾಸಿಕ್ಯೂಷನ್ ವಾದಕ್ಕೆ ವಿರುದ್ಧವಾಗಿ ಸಾಕ್ಷಿ ನುಡಿದಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ್ದ ಹೈಕೋರ್ಟ್ ವಿಚಾರಣಾಧೀನ ನ್ಯಾಯಾಲಯವು ಪ್ರಾಸಿಕ್ಯೂಷನ್ಗೆ ಆರೋಪಿಯ ತಪ್ಪುಗಳನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರ ಪ್ರಸ್ತುತಪಡಿಸಲು ಅವಕಾಶ ನೀಡದೇ ಸ್ಪಷ್ಟವಾಗಿ ತಪ್ಪೆಸಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com