
ಹತ್ಯೆಯಾದ ಮಹಿಳೆ ಚಂದ್ರಕಲಾ
ಬೆಂಗಳೂರು: ನಗರದ ಬೇಗೂರು ಠಾಣಾ ವ್ಯಾಪ್ತಿಯ ಚೌಡೇಶ್ವರಿ ಲೇಔಟ್ನಲ್ಲಿ ತಾಯಿ ಮತ್ತು 4 ವರ್ಷದ ಮಗುವಿಗೆ ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಚಂದ್ರಕಲಾ (36) ಹಾಗೂ ರಾತನ್ಯ (4) ಕೊಲೆಯಾದವರಾಗಿದ್ದಾರೆ. ಚಂದ್ರಕಲಾ ಅವರ ಪತಿ ಚನ್ನವೀರ ಸ್ವಾಮಿಯವರು ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಚಂದ್ರಕಲಾ ಅವರು ಆಯುರ್ವೇದಕ್ಕೆ ಸಂಬಂಧಿಸಿದ ವಸ್ತುಗಳನ್ನು ಆನ್'ಲೈನ್'ನಲ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬವು ಚಿತ್ರದುರ್ಗ ಮೂಲದವರಾಗಿದ್ದು, ನಗರದಲ್ಲಿ ಅಪಾರ್ಟ್ ಮೆಂಟ್ ವೊಂದರಲ್ಲಿ ನೆಲೆಸಿದ್ದರು.
ನಿನ್ನೆ ಸಂಜೆ 6.30ರ ಸುಮಾರಿಗೆ ಚಂದ್ರಕಲಾ ಅವರ ಸಹೋದರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಪಾರ್ಟ್ ಮೆಂಟ್'ನ ಮೂರನೇ ಮಹಡಿಯಲ್ಲಿ ಫ್ಲ್ಯಾಟ್ ಇದ್ದು, ಮನೆ ಬಾಗಿಲು ತೆಗೆದಿರುವುದು ಕಂಡು ಬಂದಿದೆ. ಬಳಿಕ ಚಂದ್ರಕಲಾ ಅವರು ಮನೆಯೊಳಗೆ ಹೋದಾಗ ಚಂದ್ರಕಲಾ ಹಾಗೂ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಆಘಾತಗೊಂಡಿದ್ದಾರೆ. ಕೂಡಲೇ ತನ್ನ ಭಾವನಿಗೆ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಆರೋಪಿಗಳು ಚಂದ್ರಕಲಾ ಹಾಗೂ ಮಗುವಿಗೆ ಹಲವು ಬಾರಿ ಚೂರಿ ಇರಿದಿರುವುದು ಕಂಡು ಬಂದಿದೆ. ಚಂದ್ರಕಲಾ ಅವರ ಮೃತದೇಹ ಡ್ರಾಯಿಂಗ್ ರೂಮ್ ನಲ್ಲಿ ಬಿದ್ದಿದ್ದರೆ, ಮಗುವಿನ ಮೃತದೇಹ ಮತ್ತೊಂದು ಕೋಣೆಯಲ್ಲಿ ಬಿದ್ದಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ಮಧ್ಯಾಹ್ನವೇ ತಾಯಿ ಹಾಗೂ ಮಗಳ ಹತ್ಯೆಯಾಗಿರಬಹುದು. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದು, ಬಡಾವಣೆಯಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಚಂದ್ರಕಲಾ ಪತಿ ಬೆಳಿಗ್ಗೆ 9.30ರ ಸುಮಾರಿಗೆ ಕೆಲಸಕ್ಕೆ ಹೋಗಿರುವುದನ್ನು ಗಮನಿಸಿರುವ ಆರೋಪಿಗಳು 10.30ರ ಸುಮಾರಿಗೆ ಮನೆಗೆ ನುಗ್ಗಿದ್ದಾರೆ. ಹಂತಕರು ತಿಳಿದಿರುವ ವ್ಯಕ್ತಿಗಳೇ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಗೆ ನುಗ್ಗಿರುವ ಹಂತಕರು ಹಲವು ಗಂಟೆಗಳ ಕಾಲ ಮನೆಯಲ್ಲಿದ್ದಾರೆಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್ ಮುರುಗನ್ ಅವರು, ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಭೇದಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ