ಕಾವೇರಿ ತೀರ್ಥೋದ್ಭವ: ನಿರ್ಬಂಧ ಸಡಿಲಿಸಿದ ರಾಜ್ಯ ಸರ್ಕಾರ; ವೀಕ್ಷಣೆಗೆ ಅವಕಾಶ, ಪುಣ್ಯಸ್ನಾನವಿಲ್ಲ

ಕರ್ನಾಟಕದ ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಭಕ್ತರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ತೀರ್ಥೋದ್ಭವ (ಸಂಗ್ರಹ ಚಿತ್ರ)
ತೀರ್ಥೋದ್ಭವ (ಸಂಗ್ರಹ ಚಿತ್ರ)

ಮಡಿಕೇರಿ: ಕರ್ನಾಟಕದ ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಹೇರಲಾಗಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಭಕ್ತರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಹೌದು..ಸರ್ಕಾರ ಭಕ್ತರ ಭಾವನೆಗೆ ಗೌರವ ನೀಡಿ, ಅಕ್ಟೋಬರ್ 17ರ ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಪುಣ್ಯಸ್ನಾನ ಮಾಡಲು ಅವಕಾಶವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಬುಧವಾರ ಶಾಸಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ತೀರ್ಥೋದ್ಭವಕ್ಕೆ ಭಕ್ತರ ವಾಹನಗಳಿಗೆ ತಲಕಾವೇರಿವರೆಗೂ ಪ್ರವೇಶಾವಕಾಶ ಮಾಡಲಾಗಿದೆ. ಕೋವಿಡ್‌ ಪರೀಕ್ಷಾ ವರದಿ, ಲಸಿಕೆ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ. ಕೋವಿಡ್‌ ನಿಯಮಗಳನ್ನು ಸ್ವಯಂ ಪಾಲಿಸಿ ಭಕ್ತರು ಕಾವೇರಿ ಕ್ಷೇತ್ರಕ್ಕೆ ಮುಕ್ತವಾಗಿ ಬರಬಹುದು ಎಂದು ಹೇಳಿದರು.

ಕೊಡಗಿನ ಭಕ್ತರ ಭಾವನೆಗೆ ಸರ್ಕಾರ ಗೌರವ ನೀಡಿದ್ದು, ಪವಿತ್ರ ತೀರ್ಥವನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಕೊಡಗಿನ ಜನ ಸ್ವಯಂ ನಿಯಮ ಪಾಲಿಸಿ ತೀರ್ಥೋದ್ಭವ ವೀಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. ಈ ಬಾರಿ ಪುಣ್ಯ ಸ್ನಾನ ಮಾಡಲು ಅವಕಾಶ ಇಲ್ಲ. ತೀರ್ಥೋದ್ಭವಕ್ಕೆ ಇನ್ನೂ ಹಲವು ದಿನಗಳಿದೆ. ಮುಂದೆ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹೊರಗಿನ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com