ಐಟಿ ದಾಳಿ: ಸಿಎಂ ಬೊಮ್ಮಾಯಿ ಆಪ್ತ ಸಹಾಯಕ ಹುದ್ದೆ ಹಿಂಪಡೆತ, ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್ ಬಿಎಂಟಿಸಿಗೆ ವಾಪಸ್? 

ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಪ್ತ ಎ ಉಮೇಶ್ ಅವರ ಸೇವೆಯನ್ನು ಹಿಂಪಡೆಯಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ(ಸಂಗ್ರಹ ಚಿತ್ರ)

ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಪ್ತ ಎ ಉಮೇಶ್ ಅವರ ಸೇವೆಯನ್ನು ಹಿಂಪಡೆಯಲಾಗಿದೆ.

ಸರ್ಕಾರಕ್ಕೆ ಟೀಕೆ, ಕೆಟ್ಟ ಹೆಸರು ಬರಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತತ್ ಕ್ಷಣದ ನಿಲುವು ತಳೆದರು ಎಂದು ಹೇಳಲಾಗುತ್ತಿದೆ. ನಿನ್ನೆ ಉಮೇಶ್ ಅವರ ಬೆಂಗಳೂರಿನ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಮಧ್ಯಾಹ್ನ ಮೈಸೂರಿನಲ್ಲಿ ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಿ ಆಪ್ತ ಸಹಾಯಕನ ಹುದ್ದೆ ನೇಮಕ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದರು ಎಂದು ಹೇಳಲಾಗುತ್ತಿದೆ.

ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕ: ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದವರಾದ ಎ ಉಮೇಶ್ 90ರ ದಶಕದಲ್ಲಿ ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸಕ್ಕೆ ಸೇರಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬಸ್ಥರಿಗೆ ಆಪ್ತವಾಗಿ ಅವರಿಗೆ ಹತ್ತಿರವಾಗತೊಡಗಿದರು. ಬಿ ಎಸ್ ಯಡಿಯೂರಪ್ಪನವರು ವಿರೋಧ ಪಕ್ಷದಲ್ಲಿದ್ದಾಗಲೂ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರ ಮಗ ಬಿ ವೈ ರಾಘವೇಂದ್ರದ ಆಪ್ತ ಸಹಾಯಕನಾಗಿಯೂ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗಲೆಲ್ಲ ಅವರ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಬಿಎಂಟಿಸಿ ಕಂಡಕ್ಟರ್ ನಿಂದ ಸಿಎಂ ಪಿಎವರೆಗೆ ಅವರ ಪ್ರಯಾಣ ಸುದೀರ್ಘವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಜೀವನ ಆರಂಭಿಸಿ ಇಂದು ಸ್ವಂತ ಮನೆ, ಆಸ್ತಿಪಾಸ್ತಿ ಹೊಂದಿ ಕೇವಲ ಎರಡು ವರ್ಷಗಳಲ್ಲಿ ಕೋಟಿಗಟ್ಟಲೆ ಆಸ್ತಿಪಾಸ್ತಿಗಳನ್ನು ಸಂಪಾದಿಸಿಕೊಂಡರು ಎಂದು ಮೂಲಗಳು ಹೇಳುತ್ತವೆ.

ಮಾಜಿ ಸಿಎಂಗೆ ಪಿಎ: ಕಳೆದ ಬಾರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ  ಯಡಿಯೂರಪ್ಪನವರ ಆಪ್ತ ಸಹಾಯಕನಾಗಿ ಬಿಎಂಟಿಸಿಯಿಂದ ನಿಯೋಜನೆ ಮೇಲೆ ನೇಮಕಗೊಂಡಿದ್ದರು. ಸಿಎಂ ಕೆಲಸ ಕಾರ್ಯಗಳನ್ನು, ರಮೇಶ್ ಜಾರಕಿಹೊಳಿಯವರ ರಾಜೀನಾಮೆ ನಂತರ ನೀರಾವರಿ ಇಲಾಖೆಯ ಕೆಲಸಗಳ ಉಸ್ತುವಾರಿಗಳನ್ನು ಸಹ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ವರ್ಗಾವಣೆಯಲ್ಲಿ ಪ್ರಭಾವ ತೋರಿಸುತ್ತಿದ್ದರು ಎಂದು ಕೂಡ ಹೇಳಲಾಗುತ್ತಿದೆ. ಉಮೇಶ್ ಅವರ ಆಸ್ತಿಪಾಸ್ತಿ ಸಂಪಾದನೆ, ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುವ ರೀತಿ ಪ್ರತಿಪಕ್ಷಗಳ ನಾಯಕರಿಗೆ, ರಾಜಕೀಯ ಮುಖಂಡರ ಕೆಂಗಣ್ಣಿಗೆ ಸಹ ಗುರಿಯಾಗಿದ್ದರು.

ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕನಾಗಿ ನೇಮಕ: ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕನಾಗಿ ಕೂಡ ಎ ಉಮೇಶ್ ನೇಮಕಗೊಂಡಿದ್ದರು. ಆದರೆ ಇನ್ನೂ ಕೆಲಸ ಆರಂಭಿಸಿರಲಿಲ್ಲ. ಇದೀಗ ಐಟಿ ದಾಳಿ ಹಿನ್ನೆಲೆಯಲ್ಲಿ ನೇಮಕ ಆದೇಶ ಹಿಂಪಡೆಯಲಾಗಿದ್ದು ಮಾತೃ ಸಂಸ್ಥೆಯಾದ ಬಿಎಂಟಿಸಿ ಸೇವೆಗೆ ಬರುವಂತೆ ಅದು ಉಮೇಶ್ ಅವರಿಗೆ ಆದೇಶ ನೀಡಿದೆ.

ಇಷ್ಟು ವರ್ಷಗಳ ಕಾಲ ರಾಜಕೀಯ ಮುಖಂಡರೊಂದಿಗೆ ಇದ್ದು, ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಉಮೇಶ್ ಮತ್ತೆ ಸಮವಸ್ತ್ರ ಧರಿಸಿ ಮಾತೃ ಸಂಸ್ಥೆ ಬಿಎಂಟಿಸಿಗೆ ಹೋಗುತ್ತಾರೋ ಎಂಬುದು ಕುತೂಹಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com