ಪರಿಶಿಷ್ಟ ಜಾತಿ ಪಂಗಡಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಕಂಕಣ ಬದ್ದ: ಬಿ. ಶ್ರೀರಾಮುಲು

ಪರಿಶಿಷ್ಟ ಪಂಗಡಗಳ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ‌ ಕಂಕಣಬದ್ದವಾಗಿದೆ. ಸಮುದಾಯದ ಶ್ರೇಯೋಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಸಕ್ತ ಸಾಲಿನಲ್ಲಿ 1473 ಕೋಟಿ ರೂ ಅನ್ನು ವಿನಿಯೋಗಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದರು.
ಬಿ ಶ್ರೀರಾಮುಲು
ಬಿ ಶ್ರೀರಾಮುಲು

ರಾಯಚೂರು: ಪರಿಶಿಷ್ಟ ಪಂಗಡಗಳ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ‌ ಕಂಕಣಬದ್ದವಾಗಿದೆ. ಸಮುದಾಯದ ಶ್ರೇಯೋಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಸಕ್ತ ಸಾಲಿನಲ್ಲಿ 1473 ಕೋಟಿ ರೂ ಅನ್ನು ವಿನಿಯೋಗಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದರು.

ರಾಯಚೂರಿನಲ್ಲಿಂದು 59.81 ಕೋಟಿ ವೆಚ್ಚದ ವಿವಿಧ ವಸತಿ ಶಾಲೆಗಳು, ವಿದ್ಯಾರ್ಥಿನಿಲಯಗಳು ಹಾಗೂ ವಾಲ್ಮೀಕಿ ಭವನವನ್ನು ಉದ್ಘಾಟಿಸಿ ವಿವಿಧ ಫಲಾನುಭವಿಗಳಿಗೆ ಸವಲತ್ತು ಮತ್ತು ಚೆಕ್ ವಿತರಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಕಲ್ಯಾಣ ಯಾತ್ರೆ ಎಂದು ಕರೆಯಲು ಇಚ್ಚಿಸುತ್ತೇನೆ. ರಾಜ್ಯದಲ್ಲಿ ಆರಂಭವಾಗಿರುವ ಅಭಿವೃದ್ಧಿಯ ಪರ್ವದ ಸಂಕೇತವೆಂದು ಹೇಳಿದರು.

ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುವವರಿಗೆ ಉತ್ತರ ಇಂದಿನ ಕಾರ್ಯಕ್ರಮಗಳು. ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎನ್ನುವವರಿಗೆ ಉತ್ತರ ಈ ನೆಲದಲ್ಲೇ ನಡಿಯುತ್ತಿರುವ ಈ "ಅಭಿವೃದ್ಧಿ ಆಂದೋಲನ" ಉತ್ತರವಾಗಿದೆ. ಇಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 6 ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸಮೃದ್ದಿ ಯೋಜನೆಗಳಡಿ ಆರಂಭಗೊಂಡ ಎರಡು ಮಳಿಗೆಗಳನ್ನು ಉದ್ಘಾಟಿಸಲಾಗಿದೆ. ಇವೆಲ್ಲವೂ ಅಭಿವೃದ್ಧಿ, ಪ್ರಗತಿಯ ಸಂಕೇತ ಎಂದರು.

ಜನರಿಗೆ ಈ ಯೋಜನೆಗಳನ್ನು ಅರ್ಪಿಸುವ ಮೂಲಕ "ಜನಪರ ಹಾಗೂ ಅಭಿವೃದ್ಧಿ ಪರ" ಆಡಳಿತ ನೀಡುವ ಕುರಿತು ನುಡಿದಂತೆ ನಡೆದಿದ್ದೇವೆ ಎಂಬುದನ್ನು ನಾವು ಸಾಬೀತು ಪಡಿಸುತ್ತಿದ್ದೇವೆ. ಒಂದು ಕಡೆ ಕೇಂದ್ರ ಸರ್ಕಾರ, ಇನ್ನೊಂದು ಕಡೆ ರಾಜ್ಯ ಸರ್ಕಾರ- ಆ ಆಂದೋಲನದ ಶಕ್ತಿಗಳಾಗಿವೆ. ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಹಲವು ವರ್ಷಗಳಿಂದ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವ, ಪ್ರತ್ಯೇಕ ಸಚಿವಾಲಯ ಬೇಡಿಕೆ ಇತ್ತು. ಈ ಬೇಡಿಕೆಗಳು ದಶಕಗಳವರೆಗೆ ಬೇಡಿಕೆಗಳಾಗಿಯೆ ಉಳಿದವು. ಆದರೆ ಅದನ್ನು ನಿಜ ಮಾಡಿದ್ದು ಕೇಂದ್ರದಲ್ಲಿ ವಾಜಪೇಯಿ ಸರ್ಕಾರ. ಹಾಗೆ ಅದನ್ನು ಇಲ್ಲಿ ಅದನ್ನು ನಿಜ ಮಾಡಿದ್ದು ಬೊಮ್ಮಾಯಿ ಸರ್ಕಾರ. ಅವರ ಮೊದಲ ಸಂಪುಟ ಸಭೆಯಲ್ಲಿ ಕೈಗೊಂಡ ಮೊದಲ ನಿರ್ಣಯಗಳಲ್ಲಿ ಒಂದು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ. ಅದಕ್ಕಾಗಿ ಪ್ರತ್ಯೇಕ ಸಚಿವನಾಗುವ ಗೌರವ ನನಗೆ ನೀಡಿದರು. ಇದು ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರದ ಬದ್ಧತೆಯನ್ನು ತೋರುತ್ತದೆ ಎಂದು ತಿಳಿಸಿದರು.

3E ಸೂತ್ರ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ, ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕ ಪ್ರಗತಿಗೆ ನಾವು ಬದ್ಧರಾಗಿದ್ದು, 3E ಸೂತ್ರದಲ್ಲಿ ಯೋಜನೆಗಳನ್ನ ರೂಪಿಸಲಾಗುತ್ತಿದೆ. Education, Employment and Empowerment - ಸೂತ್ರ ಆಧರಿಸಿ ನಮ್ಮ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ 404 ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಿದ್ದು 36,335 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಇನ್ನು ಸುಮಾರು 6,730 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ನೆರವು ನೀಡಲಾಗುತ್ತಿದೆ. ಪ್ರತಿ ವರ್ಷ 6 ಲಕ್ಷ ವಿದ್ಯಾರ್ಥಿಗಳಿಗೆ 209 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 45,000 ವಿದ್ಯಾರ್ಥಿಗಳಿಗೆ 16.41 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತೀರ್ಣರಾದ 28,157 ವಿದ್ಯಾರ್ಥಿಗಳಿಗೆ 77.17 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 2,740 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ.ಸಮುದಾಯದ ಸಬಲೀಕರಣಕ್ಕಾಗಿ ತಲಾ ತಲಾಂತರದಿಂದ ಅರಣ್ಯಗಳಲ್ಲಿ ವಾಸಿಸುತ್ತಿರುವ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಇದುವರೆಗೂ 15,741 ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಸಮಗ್ರ ಗಂಗಾ ಕಲ್ಯಾಣ ಯೋಜನೆ
ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯದಲ್ಲಿ 7,477 ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಸಲು ಕ್ರಮವಹಿಸಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 678 ಫಲಾನುಭವಿಗಳ ಆಯ್ಕೆಯಾಗಿದ್ದು ಶೀಘ್ರವೇ ಕೊಳವೆ ಬಾವಿ ಕೊರೆಸಲು ಕ್ರಮ ವಹಿಸಲಾಗುತ್ತಿದೆ.ಭೂ ಒಡೆತನ ಯೋಜನೆಯಡಿ ರಾಜ್ಯದಲ್ಲಿ 1069 ಪರಿಶಿಷ್ಟ ವರ್ಗಗಳ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಹಾಗೂ ರಾಯಚೂರು ಜಿಲ್ಲೆಯಲ್ಲಿ 434 ಪರಿಶಿಷ್ಟ ವರ್ಗಗಳ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ಖರೀದಿಸಿ ಮಾಲಿಕ ರನ್ನಾಗಿ ಮಾಡಲಾಗಿದೆ.ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 1,884 ಫಲಾನುಭವಿಗಳಿಗೆ ಹಾಗೂ ರಾಯಚೂರು ಜಿಲ್ಲೆಯಲ್ಲಿ 119 ಫಲಾನುಭವಿಗಳಿಗೆ ಸರಕು ಸಾಗಾಣಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆಗೆ ನೆರವು ನೀಡಲಾಗುತ್ತಿದೆ.ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿ ರಾಜ್ಯದಲ್ಲಿ 3,056 ಮತ್ತು ರಾಯಚೂರು ಜಿಲ್ಲೆಯಲ್ಲಿ 234 ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ.2018-19 ನೇ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ರಾಜ್ಯದಲ್ಲಿ 447 ಫಲಾನುಭವಿಗಳಿಗೆ ಹಾಗೂ ರಾಯಚೂರು ಜಿಲ್ಲೆಯಲ್ಲಿ 35 ಫಲಾನುಭವಿಗಳಿಗೆ ಸ್ವಾವಲಂಭಿಗಳಾಗಿ ಜೀವನ ನಡೆಸಲು ಸಹಾಯಧನ ನೀಡಲಾಗಿದೆ ಎಂದರು.

ಸ್ವಯಂ ಉದ್ಯೋಗಾವಕಾಶ
2019-20 ಹಾಗೂ 2020-21 ನೇ ಸಾಲಿನಲ್ಲಿ ಒಟ್ಟು 8,210 ಅಲೆಮಾರಿ, ಅರೆ ಅಲೆಮಾರಿ ಹಾಗೂ ಅರಣ್ಯಾಧಾರಿತ ಆದಿವಾಸಿ ಸಮುದಾಯದ ಫಲಾನುಭವಿಗಳಿಗೆ ಹಾಗೂ ರಾಯಚೂರು ಜಿಲ್ಲೆಯಲ್ಲಿ 55 ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ನೀಡಲಾಗಿದೆ. ಯಡಿಯೂರಪ್ಪನವರು ಹಾಕಿ ಕೊಟ್ಟ ಹಾದಿಯಲ್ಲೇ ಸಿ.ಎಂ ಬೊಮ್ಮಾಯಿಯವರು ಸಾಗುತ್ತಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುರಿತ ಅವರ ಕಾಳಜಿ ಪ್ರತಿ ನಿರ್ಧಾರದಲ್ಲಿ ಕಾಣುತ್ತಿದ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಅಮೃತ ಯೋಜನೆಗಳನ್ನು ಘೋಷಿಸಿದರು. ಅವುಗಳಲ್ಲಿ ಒಂದು - ಅಮೃತ ಕೌಶಲ್ಯ ತರಬೇತಿ ಯೋಜನೆ. ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಯನ್ನು 12 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರುವ ಉದ್ದೇಶ ಇದೆ. ಈ ನಿರ್ಧಾರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳ ಬಗ್ಗೆ ಸರ್ಕಾರದ ಬದ್ಧತೆ ತೋರುತ್ತದೆ. ಅಭಿವೃದ್ಧಿ ವಿಷಯದಲ್ಲೂ ಅವರ ನಿಲುವು ಸ್ಪಷ್ಟವಾಗಿದೆ ಎಂದರು.

ಕ್ರೀಡೆಗಳಲ್ಲಿ ಉನ್ನತ ಮಟ್ಟದ ತರಬೇತಿ 
ನಾಲ್ಕು ವಲಯಗಳಲ್ಲಿ ಒಂದರಂತೆ ಒಂದು ಮೊರಾರ್ಜಿ ದೇಸಾಯಿ ಶಾಲೆಯನ್ನು sports school of excellence ಆಗಿ ಮೇಲ್ದರ್ಜೆಗೇರಿಸಿ, ಶಿಕ್ಷಣದ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಕ್ಕಳಿಗೆ ಕ್ರೀಡೆಗಳಲ್ಲಿ ಉನ್ನತ ಮಟ್ಟದ ತರಬೇತಿ ನೀಡಲಾಗುವುದು ಹಾಗೂ ಇದಕ್ಕೆ 5 ಕೋಟಿ ಬಜೆಟ್ ನಲ್ಲಿ ಘೋಷಣೆಯಾಗಿದೆ. ಇದು ನಮ್ಮ ಮಕ್ಕಳು ಕ್ರೀಡಾರಂಗದಲ್ಲಿ ಉತ್ತಮ ಸಾಧನೆ ಮಾಡಲು ಪೂರಕವಾಗಲಿದೆ ಎಂದು ಹೇಳಿದರು.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ಬದ್ಧ
ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕಕ್ಕೆ) ಹಿಂದೆಂದೂ ಕೊಡದ ಆದ್ಯತೆ ನಮ್ಮ ಸರ್ಕಾರ ಕೊಡುತ್ತಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈಗಿರುವ 1500 ಕೋಟಿ ಜೊತೆಗೆ ಇನ್ನು 1500 ಕೋಟಿ ಸೇರಿಸಿ ಒಟ್ಟು 3000 ಕೋಟಿ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಭಾಗಕ್ಕೆ, ಈ ಭಾಗದ ಜನರಿಗೆ ನಮ್ಮ ಬದ್ಧತೆಯನ್ನ ಇದು ತೋರುತ್ತದೆ. ಡಾ.ನಂಜುಂಡಪ್ಪ ವರದಿ ಹಾಗೂ 371J ಯಡಿ ಹೈದರಾಬಾದ್ ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು.

ಇದೀಗ ಭಾರತ ಸಂವಿಧಾನ ಅನುಚ್ಛೇದ 371 J ಅಡಿಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಅಡಿಯಲ್ಲಿ ಹೊರಡಿಸಲಾಗಿರುವ ಆದೇಶಗಳ - ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆಗೆ - ಇತ್ತೀಚಿಗೆ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದ್ದು, ಉಪಸಮಿತಿಯ ಅಧ್ಯಕ್ಷನ ಜವಾಬ್ದಾರಿ ನನಗೆ ನೀಡಲಾಗಿದೆ. ಈ ಭಾಗದ ಜನರಿಗೆ ಸೇವೆ ಸಲ್ಲಿಸಲು ಸಿಕ್ಕಿರುವ ಈ ಅವಕಾಶ ನನ್ನ ಸೌಭಾಗ್ಯ ಎಂದರೆ ತಪ್ಪಾಗಲ್ಲ ಎಂದು ಹೇಳಿದರು.

ಈ ಮೂಲಕ ಈ ಭಾಗದ ಜನರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡಲಿದ್ದೇನೆ. ರಾಜ್ಯ ಸರ್ಕಾರ ಒಂದೆಡೆಯಾದರೆ, ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಪರಿಶಿಷ್ಟ ವರ್ಗದ ಜನಸಂಖ್ಯೆ ಹೆಚ್ಚಿರುವ ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಿದೆ. ಅದೇ - ಕೇಂದ್ರದ "ಮಹತ್ವಾಕಾಂಕ್ಷಿ ಜಿಲ್ಲೆಗಳ ರೂಪಾಂತರ" ಕಾರ್ಯಕ್ರಮ / Aspirational Districts Programme - ADP programme.ಯೋಜನೆಯಡಿ ದೇಶದ ಸುಮಾರು 115 ಜಿಲ್ಲೆಗಳಲ್ಲಿ - ರಾಯಚೂರು ಜಿಲ್ಲೆಯನ್ನೂ ಸೇರಿಸಲಾಗಿದ್ದು, ಅಭಿವೃದ್ಧಿಯ ಪಥದಲ್ಲಿ ಇದನ್ನು ಕೊಂಡೊಯ್ಯಲಾಗುತ್ತಿದೆ ಎಂದು ವಿವರಿಸಿದರು.

ADP ಕಾರ್ಯಕ್ರಮದಡಿ 3C ಸೂತ್ರ
ಜನಜೀವನ, ಆರೋಗ್ಯ, ಶಿಕ್ಷಣ, ಕೃಷಿ, ಜಲ ಸಂಪನ್ಮೂಲ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲ ಸೌಕರ್ಯ... ಇವುಗಳನ್ನು ಆಧರಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ. ADP ಕಾರ್ಯಕ್ರಮದಡಿ 3C - Convergence, Colloboration, ಮತ್ತು Competition ಸೂತ್ರ ಆಧರಿಸಿ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಲಾಗ್ತಿದೆ. Convergence - ಎಂದರೆ ಕೇಂದ್ರ-ರಾಜ್ಯ ಸರ್ಕಾರಗಳ ಯೋಜನೆಗಳನ್ನು ಒಗ್ಗೂಡಿಸುವುದು. Colloboration - ಎಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳು ಜೊತೆಗೂಡಿ ಕೆಲಸ ಮಾಡುವುದು. Competition - ಎಂದರೆ ಪಟ್ಟಿಯಲ್ಲಿ ಇರುವ ಜಿಲ್ಲೆಗಳನ್ನು ಸ್ಪರ್ಧಾತ್ಮಕವಾಗಿ ಅಭಿವೃದ್ಧಿ ಪಡಿಸುವುದು. ಇದು ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬದ್ಧತೆ ಎಂದರು.

ರಾಯಚೂರು, ಯಾದಗಿರಿ, ಕಲ್ಬುರ್ಗಿ ಗಳನ್ನು ರಾಜ್ಯದ ಇತರೆ ಜಿಲ್ಲೆಗಳ ಸಮಕ್ಕೆ ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವ ನಿರ್ಧಾರವನ್ನು ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದು, ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಶಾಸಕರಾದ ಡಾ. ಎಸ್. ಶಿವರಾಜ್ ಪಾಟೀಲ್ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಸದರಾದ ರಾಜ ಅಮರೇಶ ನಾಯಕ, ಶಾಸಕ ರಾಜ ವೆಂಕಟಪ್ಪ ನಾಯಕ ಅವರು ಮಾತನಾಡಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಪಿ.ಎಸ್. ಕಾಂತರಾಜು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕವಿತ ವಾರಂಗಲ್, ನಿಗಮದ ವಿವಿಧ ನಿರ್ದೇಶಕರುಗಳು, ನಿಗಮದ ಮಹಾವ್ಯವಸ್ಥಾಪಕರಾದ ರಾಜು, ಉಪನಿರ್ದೇಶಕರಾದ ಸುರೇಶ ರೆಡ್ಡಿ, ರಾಜಶೇಖರ ಚಿದಾನಂದಪ್ಪ ಮತ್ತಿತರರು ಉಪಸ್ಥಿತರಿದ್ದರು. ಉಪನಿರ್ದೇಶಕರಾದ ರಾಜಕುಮಾರ್ ಸ್ವಾಗತಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com