ಉಚಿತ ಅಂಗಾಂಗ ಕಸಿ ಯೋಜನೆಯಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಮುಂದು: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ಉಚಿತ ಅಂಗಾಂಗ ಕಸಿ ಚಿಕಿತ್ಸೆಯಲ್ಲಿ ಕರ್ನಾಟಕ ಸರ್ಕಾರ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್ ಮಾಂಡವೀಯ ಸರ್ಕಾರವನ್ನು ಮತ್ತು ರಾಜ್ಯವನ್ನು ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ 'ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್' ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಬೆಂಗಳೂರಿನಲ್ಲಿ 'ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್' ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

ಬೆಂಗಳೂರು: ಉಚಿತ ಅಂಗಾಂಗ ಕಸಿ ಚಿಕಿತ್ಸೆಯಲ್ಲಿ ಕರ್ನಾಟಕ ಸರ್ಕಾರ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​​ಸುಖ್ ಮಾಂಡವೀಯ ಸರ್ಕಾರವನ್ನು ಮತ್ತು ರಾಜ್ಯವನ್ನು ಶ್ಲಾಘಿಸಿದ್ದಾರೆ.

ಅವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ  ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.

ಅಂಗಾಂಗ ಕಸಿ ಚಿಕಿತ್ಸೆ ವಿಧಾನ ಅತ್ಯಂತ ಕಷ್ಟ ಮತ್ತು ದುಬಾರಿಯಾಗಿದೆ. ಈ ನಿಟ್ಟಿನಲ್ಲಿ ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸ ಕರ್ನಾಟಕ ಸರ್ಕಾರ ಮಾಡುತ್ತಿದೆ. ಈ ಮೂಲಕ ಎಲ್ಲಾ ರಾಜ್ಯಗಳಿಗಿಂತ ಮುಂದಿದೆ. ಪ್ರಧಾನಮಂತ್ರಿಗಳ ಯೋಜನೆಯನ್ನ ಕರ್ನಾಟಕ ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಆರೋಗ್ಯ ಸ್ವಾಸ್ಥ್ಯ ಯೋಜನೆ, ಅಂತ್ಯೋದಯ ಯೋಜನೆ ಮೂಲಕ ಬಡವರಿಗಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಂಡವೀಯ ಅವರಲ್ಲಿ ರಾಜ್ಯಕ್ಕೆ 1 ಕೋಟಿ ಕೊವಿಡ್ ಲಸಿಕೆ ಕೇಳಿದ್ದಕ್ಕೆ 1.5 ಕೋಟಿ ಪೂರೈಕೆ ಮಾಡಿದ್ದಾರೆ. ಪ್ರಧಾನಿಯವರು 2 ಮಹತ್ವದ ಖಾತೆಗಳನ್ನು ನೀಡಿದ್ದು, ಅವೆರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಲಸಿಕೆ, ಯೂರಿಯಾ ಕೊರತೆ ಆಗದಂತೆ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯಲ್ಲಿ 120 ಬೆಡ್ ಸೌಲಭ್ಯವಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಆರೋಗ್ಯ ಸಚಿವ ಡಾ. ಸುಧಾಕರ್, ಸಂಸದ ಪಿ.ಸಿ.ಮೋಹನ್, ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com