ಗದಗ: ಪಡಿತರ ಅಕ್ಕಿ ತಿಂದ 20 ಮಂದಿ ಅಸ್ವಸ್ಥ
ಲಕ್ಷ್ಮೇಶ್ವರ್ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಅಕ್ಕಿ ಪಡೆದು ಸೇವಿಸಿದ 20 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಇದೀಗ ಗ್ರಾಮಸ್ಥರು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
Published: 11th October 2021 08:35 AM | Last Updated: 11th October 2021 08:35 AM | A+A A-

ಸಂಗ್ರಹ ಚಿತ್ರ
ಗದಗ: ಲಕ್ಷ್ಮೇಶ್ವರ್ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಅಕ್ಕಿ ಪಡೆದು ಸೇವಿಸಿದ 20 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಇದೀಗ ಗ್ರಾಮಸ್ಥರು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಣಗೊಂಡಿರುವುದು ಕಂಡು ಬಂದಿದೆ. ಇದೀಗ ವಿತರಣೆ ಮಾಡಲಾಗಿತ್ತ ಅಕ್ಕಿಯನ್ನು ಅಧಿಕಾರಿಗಳು ಪರಿಶೀಲನೆ ಕಳುಹಿಸಿದ್ದಾರೆ.
ಗ್ರಾಮದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು, ಭೀತಿಗೊಳಗಾಗಿರುವ ಗ್ರಾಮಸ್ಥರು ಇದೀಗ ಪಡಿತರವನ್ನು ಬಿಟ್ಟು, ಸ್ಥಳೀಯ ಅಂಗಡಿಗಳಲ್ಲಿ ಅಕ್ಕಿ ಖರೀದಿಸಿ ಸೇವನೆಮಾಡುತ್ತಿದ್ದಾರೆ. ದುಬಾರಿ ಹಣ ನೀಡಿ ಖರೀದಿಸಲು ಸಾಧ್ಯವಾಗದ ಜನರು ಅನ್ನ ಸೇವನೆಯಿಂದ ದೂರ ಉಳಿದಿದ್ದಾರೆಂದು ತಿಳಿದುಬಂದಿದೆ.
ಗುರುಬಸಪ್ಪ ನಗರದ ನಿವಾಸಿ ನಾಗಪ್ಪ ಎಂಬುವವರು ಮಾತನಾಡಿ, ಯಾವ ರೀತಿಯ ಅಕ್ಕಿ ಇದು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆದರೆ, ಅನ್ನ ಮಾಡಿ ತಿಂದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅನ್ನ ತಿನ್ನುವುದನ್ನೇ ಕಳೆದ 5 ದಿನಗಳಿಂದ ನಿಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇದೀಗ ಅಕ್ಕಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಂದು ಗ್ರಾಮದ ನಿವಾಸಿಯೊಬ್ಬರು ಮಾತನಾಡಿ, ಬೇರೆ ಅಂಗಡಿಗಳಿಂದ ಅಕ್ಕಿ ಖರೀದಿ ಮಾಡಬಹುದು ಎಂಬುದು ನಮಗೆ ಗೊತ್ತಿದೆ. ಆದರೆ, ಸರ್ಕಾರವೇ ಅಕ್ಕಿ ನೀಡುತ್ತಿರುವಾಗ ದುಬಾರಿ ಹಣ ನೀಡಿ ಬೇರೆ ಅಂಗಡಿಯಲ್ಲಿ ಏಕೆ ಖರೀದಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಗದಗ ಜಿಲ್ಲಾ ಕಣ್ಗಾವಲು ಅಧಿಕಾರಿ ಜಗದೀಶ್ ನುಚ್ಚಿನ್ ಅವರು ಮಾತನಾಡಿ,"ಇದು ಪ್ಲಾಸ್ಟಿಕ್ ಅಕ್ಕಿಯಲ್ಲ. ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಎಲ್ಲವೂ ತಿಳಿಯುತ್ತದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.