ರಸ್ತೆ ಅಗೆಯುವ ಮುನ್ನ ಬಿಬಿಎಂಪಿ ಅನುಮತಿ ಕಡ್ಡಾಯ: ಇಲಾಖೆಗಳಿಗೆ ಆಯುಕ್ತ ಗೌರವ್‌ ಗುಪ್ತ ಸೂಚನೆ

ನಗರದ ರಸ್ತೆಗಳನ್ನು ಅಗೆಯುವ ಮುನ್ನ ಸಂಬಂಧಿಸಿದ ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.
ಗೌರವ್ ಗುಪ್ತ
ಗೌರವ್ ಗುಪ್ತ

ಬೆಂಗಳೂರು: ನಗರದ ರಸ್ತೆಗಳನ್ನು ಅಗೆಯುವ ಮುನ್ನ ಸಂಬಂಧಿಸಿದ ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.

ನಗರದ ರಸ್ತೆಗಳ ಸುಧಾರಣೆಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿದ ಮುಖ್ಯ ಆಯುಕ್ತರು,ಅನುಮತಿ ಪಡೆಯದೆ ರಸ್ತೆ ಅಗೆಯಲು ಆದೇಶ ನೀಡುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ನಿಟ್ಟಿನಲ್ಲಿ ಪಾಲಿಕೆ, ಬಿಎಂಆರ್‌ಸಿಎಲ್, ಜಲಮಂಡಳಿ ಹಾಗೂ ಬೆಸ್ಕಾಂ ಇಲಾಖೆಗಳು ಸಮನ್ವಯ ಸಾಧಿಸಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ. ಈ ಸಂಬಂಧ ಪಾಲಿಕೆ ಆಯಾ ಮುಖ್ಯ ಇಂಜಿನಿಯರ್ ಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಲಮಂಡಳಿ ಇಲಾಖೆ ವತಿಯಿಂದ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ಅಗೆದು, ಕಾಮಗಾರಿ ಪೂರ್ಣಗೊಂಡಿರುವ ಕುರಿತಂತೆ ಪಾಲಿಕೆಗೆ ವರದಿ ಸಲ್ಲಿಸದೇ ಇರುವುದರಿಂದ ಪಾಲಿಕೆಯ ವತಿಯಿಂದ ರಸ್ತೆ ಪುನರ್ ಸ್ಥಾಪಿಸಲು ವಿಳಂಬವಾಗುತ್ತಿದೆ. ಈ ಸಂಬಂಧ ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂಬುದನ್ನು ನಕ್ಷೆ ಮೂಲಕ ವರಸಿ ಮಾಡಿ ಕೂಡಲೆ ಪಾಲಿಕೆಗೆ ನೀಡಬೇಕು. ಜೊತೆಗೆ ರಸ್ತೆಗಳ ಪುನರ್ ಸ್ಥಾಪನೆ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಸಮನ್ವಯ ಸಾಧಿಸಲು ಜಲಮಂಡಳಿ ಇಲಾಖೆಯ ವತಿಯಿಂದ ವಲಯವಾರು ಒಬ್ಬರನ್ನು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚನೆ ನೀಡಿದರು.

ಬೆಸ್ಕಾಂ ಇಲಾಖೆಯ ವತಿಯಿಂದ ವಿದ್ಯುತ್ ಸಂಪರ್ಕ ಕಾರ್ಯಕ್ಕಾಗಿ ಕೇಬಲ್ ಅಳವಡಿಸಿ, ತಕ್ಷಣವೇ ಪರೀಕ್ಷಿಸದೇ ಇರುವುದರಿಂದ ರಸ್ತೆ ಪುನರ್ ಸ್ಥಾಪನೆ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ತಕ್ಷಣ ಕೇಬಲ್‌ಗಳನ್ನು ಅಳವಡಿಸಿ ಪಾಲಿಕೆಗೆ ವರದಿ ಸಲ್ಲಿಸುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಮೇಟ್ರೋ ಕಾಮಗಾರಿ ಕೈಗೊಂಡ ಪ್ರದೇಶದಲ್ಲಿ ರಸ್ತೆ ಪುನರ್ ಸ್ಥಾಪನೆ ಕಾರ್ಯ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಕೈಗೊಂಡಿದ್ದು, ಸದರಿ ರಸ್ತೆಯು ತುಂಬಾ ಹದಗೆಟ್ಟಿರುವುದರಿಂದ ಬಿಎಂಆರ್‌ಸಿಎಲ್ ಇಲಾಖೆಯಿಂದ ಪುನರ್ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಮುಂದುವರೆದು, ರಸ್ತೆ ಬದಿಯ ಪಾದಚಾರಿ ಮಾರ್ಗಗಳಲ್ಲಿ ಬೆಸ್ಕಾಂ ಇಲಾಖೆಯು ಅಳವಡಿಸಿರುವ ಟ್ರಾನ್ಸ್ಫಾರ್ಮರ್‌ಗಳನ್ನು ತೆರವುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ವಿಶೇಷ ಆಯುಕ್ತರು(ಯೋಜನೆ) ಮನೋಜ್ ಮಾತನಾಡಿ, ಪಾಲಿಕೆಯ ರಸ್ತೆ ಪುನರ್ ಸ್ಥಾಪನೆ ಕಾರ್ಯಕ್ಕೆ ಜಲಮಂಡಳಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು, ನಕ್ಷೆಯೊಂದಿಗೆ ರಸ್ತೆಯ ಹೆಸರು ಇನ್ನಿತರೆ ಮಾಹಿತಿಯನ್ನು ನಮೂದಿಸಿ ಪಾಲಿಕೆಗೆ ವರದಿಯನ್ನು ಸಲ್ಲಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ತುರ್ತು ಸಂದರ್ಭದಲ್ಲಿ ರಸ್ತೆ ಕತ್ತರಿಸಬೇಕಾದಲ್ಲಿ ಆಯಾ ವಲಯ ಪಾಲಿಕೆಯ ಅಧಿಕಾರಿಗಳ ಅವಗಾಹನೆಗೆ ತಂದು ಕತ್ತರಿಸಬಹುದಾಗಿದೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷ ಜಯರಾಜ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಭಾಕರ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಎಲ್ಲಾ ವಲಯ ಮುಖ್ಯ ಇಂಜಿನಿಯರ್ ಗಳು, ಜಲಮಂಡಳಿ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಬಿಎಂಆರ್ ಸಿಎಲ್ ಅಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com