ಭಕ್ತಾದಿಗಳ ಅನುಕೂಲಕ್ಕೆ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಬಿಡುಗಡೆ: ಮುಜರಾಯಿ ಇಲಾಖೆ

ಪಾರದರ್ಶಕತೆ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಾರದರ್ಶಕತೆ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಶೀಘ್ರದಲ್ಲೇ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ. 

ನಿನ್ನೆಯಷ್ಟೇ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸೇವಾ ವಿವರ, ಸ್ಥಳ ಮಾಹಿತಿ, ಸ್ಥಿರಾಸ್ತಿ ವಿವರ, ಆನ್'ಲೈನ್ ಮತ್ತು ಇ-ಸೇವೆಗಳ ಸೌಲಭ್ಯಗಳನ್ನು ಒಳಗೊಂಡ ಸೇವೆಗಳನ್ನು ಭಕ್ತಾದಿಗಳಿಗೆ ಒದಗಿಸುವ ಐಟಿಎಂಎಸ್ (ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್ ಮೆಂಟ್ ಸಿಸ್ಟಂ) ತಂತ್ರಾಂಶ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವ್ಯವಸ್ಥೆಯಿಂದ ದೇವಾಲಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ದೊರೆಯುವ ಜೊತೆಗೆ ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಭಕ್ತರು ತ್ವರಿತಗತಿಯಲ್ಲಿ ದೇವಾಲಯಗಳ ಸೇವೆ ಪಡೆಯಲು ಅನುಕೂಲವಾಗಲಿದೆ. ಮೊದಲ ಹಂತದಲ್ಲಿ ಎ ವರ್ಗದ 205, ಎರಡನೇ ಹಂತದಲ್ಲಿ ಬಿ ವರ್ಗದ 139 ದೇವಾಲಯಗಳ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು. 

ಇದೊಂದು ವಿನೂತನ ಯೋಜನೆಯಾಗಿದ್ದು, ರಾಜ್ಯದಲ್ಲಿ ಇದನ್ನು ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದ ದೇವಾಲಯಗಳ ಮಾಹಿತಿ ಒಂದೆಡೆ ದೊರೆಯುವುದರಿಂದ ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿದೆ. ದೇವಾಲಯಗಳ ಆದಾಯ ವೃದ್ಧಿಗೂ ಅದು ಪೂರಕವಾಗಲಿದೆ ಎಂದು ವಿವರಿಸಿದರು.

ವಿವಿಧ ದೇವಾಲಯಗಳಿಗೆ ಬಾಕಿ ನೀಡಬೇಕಾಗಿರುವ ತಸ್ತಿಕ್ ಮೊತ್ತ ರೂ.1.90 ಕೋಟಿ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಇದೇ ವೇಳೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com