ವಾರಾಂತ್ಯದವರೆಗೆ ಬೆಂಗಳೂರಲ್ಲಿ ಮಳೆ ಮುಂದುವರಿಕೆ; ಅ.20ರಿಂದ ಈಶಾನ್ಯ ಮುಂಗಾರು ಆರಂಭ: ಹವಾಮಾನ ಇಲಾಖೆ

ಕಳೆದೆರಡು ವಾರಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಈ ವಾರಾಂತ್ಯದವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ಅಕ್ಟೋಬರ್ 20ರಿಂದ ಈಶಾನ್ಯ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆ

ಬೆಂಗಳೂರು: ಕಳೆದೆರಡು ವಾರಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಈ ವಾರಾಂತ್ಯದವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ಅಕ್ಟೋಬರ್ 20ರಿಂದ ಈಶಾನ್ಯ ಮಾನ್ಸೂನ್ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಹೆಚ್ಚಿನ ಮಳೆಯಾಗುತ್ತಿದ್ದು, ಕಳೆದ 2 ದಿನಗಳಲ್ಲಿ ಅಂದರೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗಿನ ನಡುವೆ 18 ಸೆಂಮೀ ಮಳೆಯಾಗಿದೆ. ಅಲ್ಲದೆ ಇದು ಇನ್ನೂ 2 ದಿನಗಳ ಕಾಲ ಮುಂದುವರೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಿದ ಈ ವರೆಗಿನ ಅತ್ಯಧಿಕ ಮಳೆ ಪ್ರಮಾಣವಾಗಿದೆ ಎಂದು ಅಧಿಕಾರಿಗಳು  ಹೇಳಿದ್ದಾರೆ. 2011ರಲ್ಲಿ KIA ಸ್ಥಾಪನೆಯಾಗಿತ್ತು.

ಅ.20ರಿಂದ ಈಶಾನ್ಯ ಮಾನ್ಸೂನ್ ಆರಂಭ
ಇನ್ನು ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದೆ. ಅಕ್ಟೋಬರ್ 20 ರಿಂದ ಈಶಾನ್ಯ ಮಾನ್ಸೂನ್ ಆರಂಭವಾಗುವುದರೊಂದಿಗೆ ಇಡೀ ವಾರ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯ ತೀವ್ರತೆಯು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತದೆ. ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಮೇಲೆ ಮಳೆ ಪ್ರಮಾಣ ಆದರಿಸಿದೆ. ಕರ್ನಾಟಕದ ಬಹುತೇಕ ಭಾಗಗಳು, ವಿಶೇಷವಾಗಿ ದಕ್ಷಿಣ ಒಳ ಕರ್ನಾಟಕ (ಬೆಂಗಳೂರು ಸೇರಿದಂತೆ), ನವೆಂಬರ್ ವರೆಗೂ ಮಳೆಯಾಗಲಿದೆ. ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ತೀವ್ರವಾಗಿದೆ. ಅಲ್ಲದೆ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಉತ್ತರ ಒಳನಾಡಿನ ಕರ್ನಾಟಕದಲ್ಲಿ ಮಳೆ ಸಾಮಾನ್ಯವಾಗಿದೆ ಎಂದು ಅವರು ಹೇಳಿದ್ದಾರೆ. 

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಹವಾಮಾನ ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಕೋಶವು ನಾಗರಿಕರಿಗೆ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳು ಮತ್ತು ಇತರ ಅಂತಹ ದುರ್ಬಲ ಸ್ಥಳಗಳಲ್ಲಿ ನಿಲ್ಲದಂತೆ ಎಚ್ಚರಿಕೆ ನೀಡಿದೆ. 

ಮಳೆ ಪ್ರಮಾಣ
ಅಕ್ಟೋಬರ್ 12 ರವರೆಗೆ ಕರ್ನಾಟಕದಲ್ಲಿ 98.6 ಮಿಮೀ ಮಳೆಯಾಗಿದ್ದು, ಬೆಂಗಳೂರಿನಲ್ಲಿ 181.9 ಮಿಮೀ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 244ಮಿಮೀ ಮತ್ತು HAL ವಿಮಾನ ನಿಲ್ದಾಣ 150ಮಿಮೀ ಮಳೆಯಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com