ಗಡಿಕೇಶ್ವರದಲ್ಲಿ ಲಘು ಭೂಕಂಪನ: ಆತಂಕದಿಂದ ಗ್ರಾಮ ತೊರೆಯುತ್ತಿರುವ ಜನರು, ಕಾಳಜಿ ಕೇಂದ್ರ ತೆರೆದ ಅಧಿಕಾರಿಗಳು
ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಉಂಟಾಗುತ್ತಿರುವ ಭೂಕಂಪನದಿಂದ ಭಯಭೀತರಾಗಿದ್ದ ಜನರಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ ಅಂಜುಮ ತಬ್ಸುಮ ಅವರು ಹೇಳಿದ್ದಾರೆ.
Published: 14th October 2021 12:15 PM | Last Updated: 15th October 2021 02:05 PM | A+A A-

ಗ್ರಾಮ ತೊರೆಯಲು ನಿಂತಿರುವ ಗ್ರಾಮಸ್ಥರು.
ಚಿಂಚೋಳಿ: ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಉಂಟಾಗುತ್ತಿರುವ ಭೂಕಂಪನದಿಂದ ಭಯಭೀತರಾಗಿದ್ದ ಜನರಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ ಅಂಜುಮ ತಬ್ಸುಮ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿಗಳ ಆದೇಶದಂತೆ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಳೆದ 7 ದಿನಗಳಿಂದ ಸತತವಾಗಿ ಭೂಕಂಪನ ಆಗುತ್ತಿರುವುದರಿಂದ ಮಹಿಳೆಯರು ಮನೆಯೊಳಗೆ ಕುಳಿತು ಅಡುಗೆ ಮಾಡಲು ಅಂಜಿಕೆಯಾಗುತ್ತಿರುವುದರಿಂದ ಸರ್ಕಾರದಿಂದಲೇ ಎಲ್ಲಾ ಕುಟುಂಬದ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಜನರು ಮನೆ ಬಿಟ್ಟು ಹೋಗಿದ್ದಾರೆಂಬ ಮಾಹಿತಿ ಇತ್ತು. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳ 300 ಗ್ರಾಮಸ್ಥರು ಇದ್ದಾರೆಂದು ಹೇಳಿದ್ದಾರೆ.
ಹೀಗಾಗಿ ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಪ್ರತೀ ಕುಟುಂಬಕ್ಕೂ ರೇಶನ್ ಕಾರ್ಡ್ ಆಧಾರದ ಮೇಲೆ ಫುಡ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಎಲ್ಲರಿಗೂ ಸರ್ಕಾರದಿಂದ ಪರಿಹಾರಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪುರುಷರು ಹಾಗೂ ಮಹಿಳೆಯರಿಗೆ ಎರಡು ಶೆಡ್ ಗಳನ್ನು ತೆರೆಯಲಾಗಿದೆ. ಈ ಶೆಡ್ ಗಳಲ್ಲಿ ಮಲಗುವಂತೆ ಜನರಿಗೆ ತಿಳಿಸಲಾಗುತ್ತಿದೆ. ಹಾಸಿಗೆ ಹಾಗೂ ಹೊದಿಕೆಗಳನ್ನೂ ನೀಡಲಾಗುತ್ತಿದೆ ಎಂದಿದ್ದಾರೆ.
ಈ ನಡುವೆ ಗ್ರಾಮದಲ್ಲಿ ಭೀತಿಕರ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ವಿವಿ.ಜ್ಯೋತ್ಸ್ನಾ ಅವರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಅಧಿಕಾರಿಗಳಿಗೆ ಜನರಲ್ಲಿ ವಿಶ್ವಾಸ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ರಾಜ್ಯ ಬಿಜೆಪಿ ವಕ್ತಾರ ರಾಜ್ ಕುಮಾರ್ ಪಾಟೀಲ್ ತೆಲ್ಕುರ್ ಅವರು ಮಾತನಾಡಿ, ಶನಿವಾರ ಗಡಿಕೇಶ್ವರ ಗ್ರಾಮದಲ್ಲಿ ನಾನು ಮತ್ತು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಅವರು ಉಳಿದುಕೊಳ್ಳಲಿದ್ದೇವೆ. ಈ ಮೂಲಕ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಗ್ರಾಮಕ್ಕೆ ಶೀಘ್ರದಲ್ಲೇ ವಿಜ್ಞಾನಿಗಳೂ ಕೂಡ ಭೇಕಿ ನೀಡಲಿದ್ದಾರೆ. ನವೆಂಬರ್ ಎರಡನೇ ವಾರದಲ್ಲಿ ಭೇಟಿ ನೀಡಲಿದ್ದಾರೆಂದು ತಿಳಿಸಿದ್ದಾರೆ.
ತೆಲ್ಕುಲ್ ಅವರು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದು, ಗ್ರಾಮದ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.