ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ: ಪಾದಯಾತ್ರೆಗೆ ಕೆಜಿಎಫ್ ಶಾಸಕಿ ನಿರ್ಧಾರ

ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ ಮಾಡುವ ಸರ್ಕಾರದ ನಿರ್ಧಾರಕ್ಕೆ ಶಾಸಕಿ ರೂಪಕಲಾ ಶಶಿಧರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ...
ಶಾಸಕಿ ರೂಪಕಲಾ ಶಶಿಧರ್
ಶಾಸಕಿ ರೂಪಕಲಾ ಶಶಿಧರ್

ಕೋಲಾರ: ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರ ಮಾಡುವ ಸರ್ಕಾರದ ನಿರ್ಧಾರಕ್ಕೆ ಶಾಸಕಿ ರೂಪಕಲಾ ಶಶಿಧರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. 

ಪೊಲೀಸ್‌ ವಸತಿ ಗೃಹಗಳ ಬಳಿ ಇರುವ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಮಾತನಾಡಿದ ಅವರು. ಕೆಜಿಎಫ್ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಹೊಸದಾಗಿ ರಚನೆಗೊಂಡ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು, ಕೆಜಿಎಫ್‌ನ 9 ಪೊಲೀಸ್ ಠಾಣೆಗಳನ್ನು ಕೋಲಾರ ಜಿಲ್ಲೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ಬಿಡುವುದಿಲ್ಲ. ಒಂದು ವೇಳೆ ಸರಕಾರ ಸ್ಥಳಾಂತರಕ್ಕೆ ಮುಂದಾದರೆ, ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಹೇಳಿದ್ದಾರೆ. 

ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಉಳಿಸಿಕೊಳ್ಳಲು ಶಕ್ತಿ ಕೊಡು ಎಂದು ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಸರ್ಕಾರದ ನಿರ್ಧಾರ ವಿರೋಧಿಸಿ ಕೆಜಿಎಫ್ ನಿಂದ ಮುಖ್ಯಮಂತ್ರಿಗಳ ಕಚೇರಿವರೆಗೆ ಕಾಂಗ್ರೆಸ್ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 

146 ವರ್ಷಗಳ ಇತಿಹಾಸ ಇರುವ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಎತ್ತಂಗಡಿ ಮಾಡುವುದು ಸರಿಯಲ್ಲ. ಕೆಜಿಎಫ್‌ ಪೊಲೀಸ್‌ ಜಿಲ್ಲೆ ಎರಡು ರಾಜ್ಯಗಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದೆ. ಚಿನ್ನದ ಗಣಿಗಳ ಕಾರ್ಮಿಕರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕೆಜಿಎಫ್‌ ತಾಲೂಕಿಗೆ ಹೊಂದಿಕೊಂಡಿರುವ 14 ಸಾವಿರ ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವಿದೆ. 

ಮುಂದಿನ ದಿನಗಳಲ್ಲಿ ಚಿನ್ನದ ಗಣಿ ಪ್ರಾರಂಭಿಸುವ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದೆ ಇದೆ. 4 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶ ರಾಜ್ಯ ಸರಕಾರದ ಮುಂದೆ ಇದೆ. ಈಗಾಗಲೇ ಪೊಲೀಸ್‌ ವರಿಷ್ಠಾಧಿಕಾರಿ ಮೇಲೆಯೇ ಹಲ್ಲೆಗೆ ಯತ್ನನಡೆದಿದೆ. ಇಂಥ ಸೂಕ್ಷ್ಮ ಸ್ಥಳದಲ್ಲಿ ಸಾಮಾನ್ಯ ಜನರ ಕಾನೂನು ಸುವ್ಯವಸ್ಥೆ ಕಾಪಾಡಲು ಎಸ್ಪಿ ಕಚೇರಿ ಅಗತ್ಯವಿದೆ. ಕೆಜಿಎಫ್‌ ಪೊಲೀಸ್‌ ವಲಯದಲ್ಲಿ ಆರು ತಿಂಗಳಲ್ಲಿ 400 ಕೆಜಿ ಯಷ್ಟು ಗಾಂಜವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

ಈ ನಡುವೆ ಕೆಜಿಎಫ್ ಎಸ್ಪಿ ಕಚೇರಿಯನ್ನು ವಿಜಯನಗರಕ್ಕೆ ಮತ್ತು ಒಂಬತ್ತು ಪೊಲೀಸ್ ಠಾಣೆಗಳನ್ನು ಕೋಲಾರ ಜಿಲ್ಲೆಯೊಂದಿಗೆ ವಿಲೀನಗೊಳಿಸದಂತೆ ವಿವಿಧ ರಾಜಕೀಯ ಪಕ್ಷದ ನಾಯಕರು ನಿನ್ನೆ ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು. 

ಕಾಂಗ್ರೆಸ್ ನಾಯಕ, ಕುಡಾ ಮಾಜಿ ಅಧ್ಯಕ್ಷ ಜಯಪಾಲ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕಾರ್ತಿಕ್, ಜನತಾದಳ (ಎಸ್) ಬಂಗಾರಪೇಟೆ ತಾಲೂಕು ವೀಕ್ಷಕ ಕೆ.ರಾಜೇಂದ್ರನ್ ಅವರು, ನಿನ್ನೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. 

ಮಾಜಿ ಶಾಸಕ ವೈ.ಸಂಪಂಗಿ ಅವರು ಜಿಲ್ಲಾ ಸಚಿವ ಮುನಿರತ್ನ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com