ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ
ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
Published: 15th October 2021 06:56 PM | Last Updated: 15th October 2021 07:15 PM | A+A A-

ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಮತ್ತಿತರರು
ಮೈಸೂರು: ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಸರ್ವಾಲಂಕಾರ ಭೂಷಿತನಾಗಿದ್ದ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಅಂಬಾರಿ ಮತ್ತು ಅದರೊಳಗಿನ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಶಾಂತಚಿತ್ತದಿಂದ ಹೆಜ್ಜೆ ಹಾಕಿದ. ಆತನ ಎಡಬಲದಲ್ಲಿ ಕುಮ್ಕಿ ಆನೆಗಳು ಸಾಥ್ ನೀಡಿದವು. ಸಾಂಪ್ರದಾಯಿಕ ಅಲಂಕಾರದಿಂದ ಅಂಬಾರಿ ಕಂಗೊಳಿಸುತ್ತಿತ್ತು.
ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಬೊಗಸೆಯಲ್ಲಿ ಪುಷ್ಪಗಳನ್ನು ಹಿಡಿದು ಕಣ್ಣುಮುಚ್ಚಿ ಪ್ರಾರ್ಥಿಸಿದರು. ನಂತರ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಹೂಗಳು ತಾಯಿಯ ಮೇಲೆ ಹನಿಮಳೆಗರೆಂತೆ ತಾಕಿದವು.
ನಾಡಿನ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿದ ಬಳಿಕ ವೇದಿಕೆಯಲ್ಲಿದ್ದ ಮೈಸೂರು ಒಡೆಯರ್ ಪರಂಪರೆಯ ಯದುವೀರ್ ಒಡೆಯರ್, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸಫಮಶೇಖರ್, ನಗರದ ಪ್ರಥಮ ಪ್ರಜೆ ಸುನಂದಾ ಫಾಲನೇತ್ರ ಅವರು ಪುಷ್ಪಾರ್ಚನೆ ಮಾಡಿದರು. ಜಿಲ್ಲಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಉಪಸ್ಥಿತರಿದ್ದರು.
ನಂದಿಧ್ವಜಕ್ಕೆ ಸಿಎಂ ಪೂಜೆ: ಸಂಜೆ 4-36ರಿಂದ 4-46 ಗಂಟೆಯವರೆಗೆ ಅರಮನೆ ಬಲರಾಮ ಧ್ವಾರದಲ್ಲಿ ನಂದಿ ಧ್ವಜ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯದಶಮಿ ಮೆರಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳೊಂದಿಗೆ ಆರು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ನಾಡಿನ ಕಲೆ, ಸಂಸ್ಕೃತಿ, ಇತಿಹಾಸ, ಸಾಹಿತ್ಯ ಅನಾವರಣಗೊಂಡಿತು. ಮೈಸೂರು ನಗರಾಭಿವೃದ್ದಿ, ಮೈಸೂರಿನ ಬಗ್ಗೆ ಮಾಹಿತಿ ಒಳಗೊಂಡ ಸ್ತಬ್ಧಚಿತ್ರ, ಪರಿಸರ ಇಲಾಖೆಯಿಂದ 'ಬೇಡ ನನಗೆ ಕೊಡಲಿ, ನೆರಳನೇಕೆ ಕೊಡಲಿ' ಸ್ತಬ್ಧಚಿತ್ರ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ 'ಸಮಗ್ರ ಕೃಷಿ' ಸ್ತಬ್ಧಚಿತ್ರ, ಆರೋಗ್ಯ ಇಲಾಖೆಯಿಂದ 'ಕರೊನಾ ಮುಕ್ತ ಕರ್ನಾಟಕ' ಸ್ತಬ್ಧಚಿತ್ರ, ಮೈಸೂರು ದಸರಾ ಉಪಸಮಿತಿಯಿಂದ 'ಅರಮನೆ ವಾದ್ಯಗೋಷ್ಠಿ' ಸ್ತಬ್ಧಚಿತ್ರ, ಆಜಾದ್ ಕಾ ಅಮೃತ ಮಹೋತ್ಸವ ಸ್ತಬ್ಧಚಿತ್ರ ಭಾಗಿಯಾಗಿದ್ದವು. 10ಕ್ಕೂ ಹೆಚ್ಚು ತಂಡಗಳ ಕಲಾವಿದರು ಮೆರವಣಿಗೆಯಲ್ಲಿ ಸಾಗಿದರು.
ಇದೇ ಮೊದಲ ಬಾರಿಗೆ ಮೆರೆವಣಿಗೆ ಮೂಲಕ ಉತ್ಸವ ಮೂರ್ತಿ ಅರಮನೆಗೆ: ಅಂಬಾರಿಯಲ್ಲಿ ಸಾಗುವ ಉತ್ಸವ ಮೂರ್ತಿಯನ್ನು ಅರಮನೆಗೆ ಇದೇ ಮೊದಲ ಬಾರಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ಅಲಂಕೃತ ವಾಹನದಲ್ಲಿದ್ದ ಉತ್ಸವ ಮೂರ್ತಿಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯದೊಂದಿಗೆ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು.
ಅಲಂಕೃತಗೊಂಡ ದೇವಿಯನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದಿತ್ತು. ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಭಜನಾ ತಂಡ, ವೇದಘೋಷದೊಂದಿಗೆ ತೆರೆದ ವಾಹನದಲ್ಲಿ ಅರಮನೆಗೆ ಕರೆತರುತ್ತಿದ್ದ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಬೆಟ್ಟದ ಪ್ರವೇಶದ್ವಾರ, ರಸ್ತೆಯ ಇಕ್ಕೆಲಗಳಲ್ಲಿ ಭಕ್ತ ಸಾಗರ ಮೆರೆದಿತ್ತು. ಉತ್ಸವ ಮೂರ್ತಿ ಸಾಗುವ ಮಾರ್ಗದ ರಸ್ತೆಯಲ್ಲಿ ಹೂಗಳನ್ನು ಚೆಲ್ಲಿ ದೇವಿಯನ್ನು ಬರಮಾಡಿಕೊಳ್ಳಲಾಯಿತು.
ವಿದ್ಯುತ್ ದೀಪಾಲಂಕಾರ ಒಂಬತ್ತು ದಿನಗಳವರೆಗೆ ವಿಸ್ತರಣೆ: ವಿದ್ಯುತ್ ದೀಪಾಲಂಕಾರವನ್ನು ಒಂಬತ್ತು ದಿನಗಳವರೆಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ನಾಡಿನ ವಿವಿಧ ಕಡೆಗಳಿಂದ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಗೂ ಜನಪ್ರತಿನಿಧಿಗಳು ಮತ್ತು ಜನತೆಯ ಬೇಡಿಕೆಯ ಮೇರೆಗೆ ವಿದ್ಯುತ್ ದೀಪಾಲಂಕಾರವನ್ನು ವಿಸ್ತರಿಸುತ್ತಿರುವುದಾಗಿ ಅವರು ತಿಳಿಸಿದರು.