ಒಳ್ಳೆ ಸುದ್ದಿ: ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1 ಕ್ಕಿಂತ ಕಡಿಮೆ!
ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆಯಿದೆ. ಆದಾಗ್ಯೂ, ನವೆಂಬರ್ ವರೆಗೂ ಸರ್ಕಾರ ಸೋಂಕಿನ ಪರೀಕ್ಷೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
Published: 16th October 2021 05:33 PM | Last Updated: 16th October 2021 05:37 PM | A+A A-

ಆರೋಗ್ಯ ಕಾರ್ಯಕರ್ತರೊಬ್ಬರು ಬೆಂಗಳೂರಿನ ಕ್ರಾಂತಿವೀರ ರೈಲು ನಿಲ್ದಾಣದ ಬಳಿ ಸ್ವಾಬ್ ಸಂಗ್ರಹಿಸುತ್ತಿರುವ ಚಿತ್ರ
ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆಯಿದೆ. ಆದಾಗ್ಯೂ, ನವೆಂಬರ್ ವರೆಗೂ ಸರ್ಕಾರ ಸೋಂಕಿನ ಪರೀಕ್ಷೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ವಾರ್ ರೂಮ್ ಮಾಹಿತಿ ಪ್ರಕಾರ, ಕಳೆದ ಏಳು ದಿನಗಳಲ್ಲಿ 20 ಜಿಲ್ಲೆಗಳಲ್ಲಿನ ಪಾಸಿಟಿವಿಟಿ ದರ ರಾಜ್ಯದ ಸರಾಸರಿಗಿಂತ ಕಡಿಮೆಯಿದ್ದು, ಒಟ್ಟಾರೇ ರಾಜ್ಯದಲ್ಲಿನ ಕೋವಿಡ್ ಪಾಸಿಟಿವಿಟಿ ದರ ಶೇ. 0.31 ರಷ್ಟಿದೆ. ಅಕ್ಟೋಬರ್ ಆರಂಭದಲ್ಲಿ ಚಿಕ್ಕಮಗಳೂರಿನಲ್ಲಿ ಶೇ. 1.69, ಕೊಡಗಿನಲ್ಲಿ ಶೇ 1.56, ಉಡುಪಿ ಶೇ. 1.19 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ, 1. 05 ರಷ್ಟು ಕೋವಿಡ್ ಪಾಸಿಟಿವಿಟಿ ದರ ಕಂಡುಬಂದಿದೆ.
ಅಕ್ಟೋಬರ್ 12 ರಂದು ಎರಡು ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ರೇಟ್ ಶೇ. 1ಕ್ಕಿಂತ ಹೆಚ್ಚಾಗಿತ್ತು. ಮೈಸೂರಿನಲ್ಲಿ ಶೇ. 1. 04 ಮತ್ತು ಹಾಸನದಲ್ಲಿ ಶೇ. 1. 03 ರಷ್ಟಿತ್ತು. ಆದರೆ, ಅಕ್ಟೋಬರ್ 14 ರಂದು ಈ ಎರಡು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆಯಿತ್ತು. ಮೈಸೂರಿನಲ್ಲಿ ಶೇ. 0.82 ಮತ್ತು ಹಾಸನದಲ್ಲಿ ಶೇ. 0.77 ರಷ್ಟು ವರದಿಯಾಗಿತ್ತು. ಚಿಕ್ಕಮಗಳೂರಿನಲ್ಲಿ ಶೇ. 0.49, ಉಡುಪಿ ಶೇ. 0.44 ಸೇರಿದಂತೆ ಇತರ ಎಲ್ಲಾ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತಲೂ ಕಡಿಮೆ ದಾಖಲಾಗಿತ್ತು. ಕಲಬುರಗಿ ಮತ್ತು ಯಾದಗಿರಿಯಲ್ಲಿ ಪಾಸಿಟಿವಿಟಿ ದರ ಶೂನ್ಯವಾಗಿದ್ದರೆ ಬಾಗಲಕೋಟೆ ಮತ್ತು ಹಾವೇರಿ ಶೇ. 0.02 ರಷ್ಟಿತ್ತು.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದ್ದರೂ, ನವೆಂಬರ್ ಕೊನೆಯವರೆಗೂ ಪರೀಕ್ಷೆ ನಡೆಸುವುದನ್ನು ಮುಂದುವರೆಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಎಂ. ಕೆ ಸುದರ್ಶನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆಕ್ಟೋಬರ್ ಮತ್ತು ನವೆಂಬರ್ ನಲ್ಲಿ ಇಡೀ ರಾಜ್ಯದಲ್ಲಿ 1, 10,000 ಪರೀಕ್ಷೆ ನಡೆಸಬೇಕಾಗುತ್ತದೆ. ಇದರಲ್ಲಿ ಬೆಂಗಳೂರು ಒಂದರಲ್ಲಿಯೇ 50 ಸಾವಿರ ಟೆಸ್ಟಿಂಗ್ ಮಾಡಬೇಕಾಗಿದೆ. ಮಾಸ್ಕ್ ಧರಿಸುವುದು, ಲಸಿಕೆ ಹಾಗೂ ಟೆಸ್ಟಿಂಗ್ ಪ್ರಮುಖ ಸಂಗತಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಿದ್ದರೂ ನಿರ್ಲಕ್ಷ್ಯ ಸಲ್ಲದು, ಇದೀಗ ಕುಟುಂಬ ಕ್ಲಸ್ಟರ್ ನಲ್ಲಿ ಸೋಂಕು ಕಂಡುಬರುತ್ತಿದ್ದು, ಸಮುದಾಯ ಕ್ಲಸ್ಟರ್ ನಲ್ಲಿ ಕಂಡುಬರುತ್ತಿಲ್ಲ. ಲಸಿಕೆ ನೀಡುವಿಕೆ, ರೋಗ ನಿರೋಧಕ ಶಕ್ತಿ ವೃದ್ಧಿಯಿಂದ ಪಾಸಿಟಿವಿಟಿ ಕಡಿಮೆಯಾಗಿರಬಹುದು, ಅಕ್ಟೋಬರ್- ನವೆಂಬರ್ ನಲ್ಲಿ ಮೂರನೇ ಅಲೆ ಬರಬಹುದೆಂಬ ಊಹಿಸಿತಾದರೂ, ಸಮಯ ಮೀರುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.