ವಿಪತ್ತು ಎದುರಾದರೂ ನ್ಯಾಯಾಂಗದ ಕೆಲಸ ನಿಲ್ಲಬಾರದು: ನ್ಯಾಯಮೂರ್ತಿ ಎಎಸ್ ಓಕಾ

ಮೂರನೇ ಅಲೆ ಅಥವಾ ಇನ್ನಾವುದೇ ವಿಪತ್ತು ಎದುರಾದರೆ ನ್ಯಾಯಾಂಗದ ಕೆಲಸ ಕೇವಲ ಉನ್ನತ ನ್ಯಾಯಾಲಯಗಳಿಗೆ ಸೀಮಿತವಾಗಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹೇಳಿದ್ದಾರೆ.
ನ್ಯಾ.ಎಎಸ್ ಓಕಾ
ನ್ಯಾ.ಎಎಸ್ ಓಕಾ

ಬೆಂಗಳೂರು: ಮೂರನೇ ಅಲೆ ಅಥವಾ ಇನ್ನಾವುದೇ ವಿಪತ್ತು ಎದುರಾದರೆ ನ್ಯಾಯಾಂಗದ ಕೆಲಸ ಕೇವಲ ಉನ್ನತ ನ್ಯಾಯಾಲಯಗಳಿಗೆ ಸೀಮಿತವಾಗಬಾರದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ. ಓಕಾ ಅವರನ್ನು ಪದೋನ್ನತಿಗೊಳಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೋವಿಡ್ ಸೇರಿದಂತೆ ಏನೇ ಬಂದರೂ ನ್ಯಾಯಾಂಗದ ಕೆಲಸ ಯಾವುದೇ ಅಡೆ ತಡೆ ಇಲ್ಲದೆ ಮುಂದುವರೆಯುತ್ತದೆ ಎಂದು ನ್ಯಾಯಾಂಗ ಸೇರಿದಂತೆ ಸಂಪೂರ್ಣ ನ್ಯಾಯಿಕ ಸಮುದಾಯವು ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಓಕಾ ಹೇಳಿದರು.

ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಿಗೆ ವರ್ಚುವಲ್ ವಿಧಾನದ ಮೂಲಕ ವಿಚಾರಣೆ ನಡೆಸುವ ವ್ಯವಸ್ಥೆ ಅಭಿವೃದ್ಧಿಗೊಳಿಸಿದರೆ ಕೋವಿಡ್ ರೀತಿಯ ವಿಪತ್ತುಗಳ ಸಂದರ್ಭದಲ್ಲಿ ಸುಲಲಿತವಾಗಿ ವಿಚಾರಣೆ ನಡೆಸಬಹುದು. ವೀಡಿಯೊ ಕಾನ್ಫರೆನ್ಸ್ ವಿಚಾರಣೆಗಳು ಭೌತಿಕ ವಿಚಾರಣೆಗೆ ಪರ್ಯಾಯವಲ್ಲ. ಆದರೆ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ತಂತ್ರಜ್ಞಾನ ಬಳಸುವುದನ್ನು ನಿರಾಕರಿಸಲಾಗದು. ಕೋವಿಡ್ ವೇಳೆ ಎಲ್ಲಾ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಆರಂಭಿಸಿದವು. ಆರಂಭದಲ್ಲಿ ಹಿರಿಯ ವಕೀಲರಿಂದ ಹಿನ್ನಡೆ ಉಂಟಾಗಿದ್ದರೂ, ಅವರಲ್ಲಿ ಹಲವರು ವರ್ಚುವಲ್ ವಿಚಾರಣೆಗೆ ಒಗ್ಗಿಕೊಂಡರು, ನಾನು ಕರ್ನಾಟಕದಲ್ಲಿ ಇರುವವರೆಗೂ ಅವರು ಭೌತಿಕವಾಗಿ ನ್ಯಾಯಾಲಯಗಳಿಗೆ ಹಾಜರಾಗಲಿಲ್ಲ ಎಂದು ತಿಳಿಸಿದರು.

ತಾನು ಪ್ರಾಕ್ಟೀಸ್ ಮಾಡುತ್ತಿದ್ದ ಅವಧಿಗೆ ಹೋಲಿಸಿದರೆ ನ್ಯಾಯಾಂಗ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಿದೆ. ಆದರೂ "ಮಹಾರಾಷ್ಟ್ರದ ಮೂಲಭೂತ ಸೌಕರ್ಯಕ್ಕಿಂತ ಕರ್ನಾಟಕದಲ್ಲಿ ನ್ಯಾಯಾಂಗ ಮೂಲಸೌಕರ್ಯ ಉತ್ತಮವಾಗಿದೆ. ಕರ್ನಾಟಕ ನ್ಯಾಯಾಲಯ ಸಂಕೀರ್ಣಗಳ ಸುತ್ತಲೂ ವಿಶಾಲ ತೆರೆದ ಸ್ಥಳ ಇರುವುದರಿಂದ ಅವು ಉತ್ತಮವಾಗಿವೆ. ಹುಬ್ಬಳ್ಳಿಯಲ್ಲಿ ನ್ಯಾಯಾಲಯ ಸಂಕೀರ್ಣವಿದ್ದು ಇದು ತಂತ್ರಜ್ಞಾನವನ್ನು ಚೆನ್ನಾಗಿ ಬಳಸುತ್ತದೆ ಎಂಬ ಸರಳ ಕಾರಣಕ್ಕಾಗಿ ಅತ್ಯಾಧುನಿಕ ಕಟ್ಟಡವಾಗಿದೆ. ನ್ಯಾಯಾಲಯದ ನೆಲಮಾಳಿಗೆಯಲ್ಲಿ ಕಂಪ್ಯೂಟರ್ ಇದ್ದು ಅಲ್ಲಿಂದ ಅವರು ಇಡೀ ಕಟ್ಟಡವನ್ನು ನಿಭಾಯಿಸುತ್ತಾರೆ ಎಂದರು.

ಕರ್ನಾಟಕದ ಹಲವೆಡೆ ವಕೀಲರ ಸಂಘಗಳಿಗೆ ಪ್ರತ್ಯೇಕ ಕಟ್ಟಡ ವ್ಯವಸ್ಥೆ ಇರುವುದನ್ನು ಪ್ರಸ್ತಾಪಿಸಿದ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ 5 ಅಂತಸ್ತಿನ ಕಟ್ಟಡವನ್ನು ವಕೀಲರ ಸಂಘಕ್ಕೆಂದೇ ಮೀಸಲಿಟ್ಟಿದ್ದು ಇದರಲ್ಲಿ ಒಂದು ಸಭಾಂಗಣ, ಪ್ರತ್ಯೇಕ ಚೇಂಬರ್ಗಳು ಹಾಗೂ ಎರಡು ರೆಸ್ಟೋರೆಂಟ್ಗಳಿವೆ ಎಂದು ತಿಳಿಸಿದರು.

ಮಹಾರಾಷ್ಟ್ರದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಿನ್ನ ರೀತಿಯ ಕಾನೂನು ಶಿಕ್ಷಣ ಪದ್ದತಿ ಇರುವುದನ್ನು ಪ್ರಸ್ತಾಪಿಸಿದ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲಿನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ 160 ಕಾನೂನು ಶಾಲೆಗಳು ಏಕರೂಪದ ಕಾನೂನು ಶಿಕ್ಷಣವನ್ನು ನೀಡುತ್ತಿವೆ. ಪಠ್ಯಕ್ರಮ ಮತ್ತು ಅದರ ಜಾರಿಗೆ ಕಾರಣವಾದ ಶಿಕ್ಷಕರು ಮತ್ತು ಸಿಬ್ಬಂದಿಗಳೆಲ್ಲರೂ ಕಾನೂನು ಕ್ಷೇತ್ರದಿಂದ ಬಂದವರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com