ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡಕ್ಕೆ ಕುತ್ತು: ಕುಸಿಯುವ ಭೀತಿಯಲ್ಲಿ ಬಿನ್ನಿಮಿಲ್ ಪೊಲೀಸ್ ಕ್ವಾರ್ಟರ್ಸ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದು, ಬಿನ್ನಿಮಿಲ್ ಸರ್ಕಲ್ ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಏಳು ಅಂತಸ್ತಿನ ಕಟ್ಟಡ ವಾಲಿದ್ದು, ಕುಸಿಯುವ ಭೀತಿ ಎದುರಾಗಿದೆ.
ಬಿನ್ನಿಮಿಲ್ ಪೊಲೀಸ್ ಕ್ವಾರ್ಟರ್ಸ್
ಬಿನ್ನಿಮಿಲ್ ಪೊಲೀಸ್ ಕ್ವಾರ್ಟರ್ಸ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.

ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದು, ಬಹುಮಹಡಿ ಕಟ್ಟಡವೊಂದು ವಾಲಿದೆ. ನಗರದ ಬಿನ್ನಿಮಿಲ್ ಸರ್ಕಲ್ ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಏಳು ಅಂತಸ್ತಿನ ಕಟ್ಟಡ ವಾಲಿದ್ದು, ಕುಸಿಯುವ ಭೀತಿ ಎದುರಾಗಿದೆ.  ಒಟ್ಟು ನಾಲ್ಕು ಪೊಲೀಸ್ ಕ್ವಾರ್ಟರ್‌ಗಳ ಪೈಕಿ ಬಿ-ಬ್ಲಾಕ್ ವಾಲಿದೆ ಎನ್ನಲಾಗಿದೆ. 

ಕೆಲವೇ ವರ್ಷಗಳ ಹಿಂದಷ್ಟೇ ಈ ಪೊಲೀಸ್ ಕ್ವಾರ್ಟರ್ಸ್ ಅನ್ನು ನಿರ್ಮಿಸಲಾಗಿತ್ತು. ಈ ಪೊಲೀಸ್ ಕ್ವಾರ್ಟರ್ಸ್ ನಲ್ಲಿ 32 ಕುಟುಂಬಗಳು ವಾಸವಾಗಿದ್ದು, ಒಂದು ವರ್ಷದ ಹಿಂದಷ್ಟೇ ಪೊಲೀಸ್ ಕುಟುಂಬಗಳು ಈ ಕ್ವಾರ್ಟಸ್​ಗೆ ಬಂದಿದ್ದವು. ಇದೀಗ ಕಟ್ಟಡ ವಾಲಿದ್ದರೂ ಆತಂಕದಲ್ಲೇ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಕಟ್ಟಡ ನಿನ್ನೆ ಕುಸಿಯುವ ಹಂತಕ್ಕೆ ವಾಲಿದೆ. ಒಂದೂವರೆ ಅಡಿಯಷ್ಟು ಕಟ್ಟಡ ಎಡಕ್ಕೆ ವಾಲಿದೆ ಎನ್ನಲಾಗಿದೆ. ವಾಲಿದ ಏಳು ಅಂಸ್ತಿನ ಕಟ್ಟಡ ಕೇವಲ ಮೂರು ವರ್ಷದ ಹಿಂದಷ್ಟೆ ನಿರ್ಮಾಣವಾಗಿತ್ತು. ಕಳಪೆ ಕಾಮಗಾರಿಯಿಂದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕ್ವಾರ್ಟಸ್ ನಿವಾಸಿ ಲಕ್ಷ್ಮಿ ಕಿಟ್ಟಿಮನಿ, ಕಳೆದ ವಾರ ಕಮಲ್ ಪಂತ್ ಭೇಟಿ ನೀಡಿದ್ದರು. ಇಲ್ಲಿನ ಬಿ ಬ್ಲಾಕ್ ನಿವಾಸಿಗಳನ್ನ ಶಿಫ್ಟ್ ಮಾಡಲು ಹೇಳಿದ್ದಾರೆ. ಬಿಲ್ಡಿಂಗ್ ಡೆಮಾಲಿಷ್ ಮಾಡುತ್ತಾರೋ ಅಥವಾ ಏನಾದರೂ ಸಪೋರ್ಟ್ ಕೊಡುತ್ತಾರೋ ಗೊತ್ತಿಲ್ಲ. ಇಲ್ಲಿಂದ ಅನ್ನಪೂರ್ಣೇಶ್ವರಿ ನಗರದ ಕ್ವಾರ್ಟಸ್​ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ನಮ್ಮ ಎಂಜಿನಿಯರ್ ಗಳ ಪಾತ್ರವಿಲ್ಲ ಎಂದ ಬಿಬಿಎಂಪಿ
ಇನ್ನು ಕಟ್ಟಡ ವಾಲಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಕಟ್ಟಡವನ್ನು ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾಗಿದೆ ಮತ್ತು ಬಿಬಿಎಂಪಿ ಎಂಜಿನಿಯರ್‌ಗಳ ಪಾತ್ರವಿಲ್ಲ. ರಾತ್ರೋ ರಾತ್ರಿ ಕಟ್ಟಡ ಹೀಗೆ ವಾಲಲು ಸಾಧ್ಯವಿಲ್ಲ. ಆದರೆ ಕಳೆದ ಒಂದು ವರ್ಷದಿಂದಲೂ ಕಟ್ಟಡದಲ್ಲಿ ಸಮಸ್ಯೆ ಇತ್ತು. ಆದರೆ ದುರಸ್ತಿಯಾಗಿರಲಿಲ್ಲ. ಹೀಗಾಗಿ ಕಟ್ಟಡ ವಾಲಿರುವ ಸಾಧ್ಯತೆ. ಈಗ ಅಪಾಯ ಎದುರಿಸುತ್ತಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ಏನು ತಪ್ಪಾಗಿದೆ ಎಂದು ನಿರ್ಣಯಿಸಲು ತಜ್ಞರ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಇದೇ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಮೇಲ್ನೋಟಕ್ಕೆ ಕಟ್ಟಡ ವಾಲಿರುವುದು ಕಂಡುಬಂದಿದೆ. ಜಪಾನ್ ಟೆಕ್ನಾಲಜಿ ಬಳಸಿ ನಿರ್ಮಿಸಿರುವ ಕಟ್ಟಡವಿದು. ಬರೀ ಸಿಮೆಂಟ್​ ಬ್ಲ್ಯಾಕ್​ಗಳಿಂದ ಕಟ್ಟಡ ನಿರ್ಮಿಸಲಾಗಿದೆ. ಒಂದು ಬ್ಲ್ಯಾಕ್​ನಿಂದ ಇನ್ನೊಂದು ಬ್ಲ್ಯಾಕ್​ಗೆ ಬೀಮ್​ ಹಾಕಿ ಸಪೋರ್ಟ್​ ಕೊಟ್ಟಿಲ್ಲ. ಕಟ್ಟಡ ನಿರ್ಮಾಣವಾಗಿ 3 ವರ್ಷವಾಗಿದೆ. ಆರೂವರೆ ಇಂಚು ಬಿರುಕು ಬಿಟ್ಟಿದೆ. ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಮಾಹಿತಿ ಕೊಡಲಾಗಿದೆ ಎಂದು ಹೇಳಿದರು.

2019ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಅದರೆ ಕಟ್ಟಡ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಅದು ವಾಲಲು ಪ್ರಾರಂಭಿಸಿತು. ಇಲ್ಲಿಯವರೆಗೆ, ಬಿ-ಬ್ಲಾಕ್‌ನಲ್ಲಿ ಉಳಿದುಕೊಂಡಿರುವ 64 ಕುಟುಂಬಗಳ ಪೈಕಿ 32 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕಟ್ಟಡ ಸಂಕೀರ್ಣವು ಒಟ್ಟು ಮೂರು ಬ್ಲಾಕ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 64 ಫ್ಲಾಟ್‌ಗಳನ್ನು ಒಳಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com